Index   ವಚನ - 12    Search  
 
ಘಟಸ್ಥಾವರದೊಳಗನೊಡೆದು ಕಿಚ್ಚಿನ ಹೊರೆಯ ಕಂಡೆ. ಕಾಣಿಸಿ ಮಿಕ್ಕಾದ ಹೊರಗಣ ಹೊರೆಯ ತಿಗುಡಂ ಕೆತ್ತಿ ಕಂಬವ ಶುದ್ಧೈಸಿ ನೆಲವಟ್ಟಕ್ಕೆ ಚದುರಸವನಿಂಬುಗೊಳಿಸಿ ಮೇಲಣವಟ್ಟಕ್ಕೆ ಎಂಟುಧಾರೆಯ ಏಣಂ ಮುರಿದು ಕಡಿಗೆವಟ್ಟ ವರ್ತುಳಾಕಾರದಿಂ ಶುದ್ಧವ ಮಾಡಿ ಏಕೋತ್ತರಶತಸ್ಥಲವನೇಕೀಕರಿಸಿ ಒಂದು ದ್ವಾರದ ಬೋದಿಗೆಯಲ್ಲಿ ಕಂಬವ ಶುದ್ಧೈಸಿ ಕಂಬ ಎರವಿಲ್ಲದೆ ನಿಂದ ಮತ್ತೆ ಚದುರಸಭೇದ. ಅಷ್ಟದಿಕ್ಕಿನ ಬಟ್ಟೆಕೆಟ್ಟು ನವರಸ ಬಾಗಿಲು ಮುಚ್ಚಿ, ತ್ರಿಕೋಣೆಯನುಲುಹುಗೆಟ್ಟು, ಮುಂದಣ ಬಾಗಿಲು ಮುಚ್ಚಿ ಹಿಂದಣ ಬಾಗಿಲು ಕೆಟ್ಟು, ನಿಜವೊಂದೆ ಬಾಗಿಲಾಯಿತ್ತು. ಈ ಕೆಲಸವ ಆ ಕಂಬದ ನಡುವೆ ನಿಂದು ನೋಡಲಾಗಿ ಮಂಗಳಮಯವಾಗಿ, ಇದು ಯೋಗಸ್ಥಲವಲ್ಲ. ಇದು ಘನಲಿಂಗ ಯೋಗಸ್ಥಲ, ಇಂತೀ ಭೇದವ ತಿಳಿದಡೆ ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವಲ್ಲದಿಲ್ಲಾ ಎಂದೆ.