Index   ವಚನ - 26    Search  
 
ರತ್ನಜ್ಯೋತಿಯ ಪ್ರಭೆಯೊಳಗಣ ಸ್ವಯರತ್ನ ಶರಣಂಗೆ ತತ್ಪದವೆಂದಡೇನಯ್ಯ? ತ್ವಂ ಪದವೆಂದಡೇನಯ್ಯ? ಅಸಿಪದವೆಂದಡೇನಯ್ಯ? ತತ್ಪದವೆಂದಡೆ ಲಿಂಗ, ತ್ವಂ ಪದವೆಂದಡೆ ಅಂಗ, ಅಸಿಪದವೆಂದಡೆ ಲಿಂಗಾಂಗಸಂಯೋಗವಯ್ಯ. ಇಂತೀ ತ್ರಿವಿಧವನು ಮೀರಿದಾತ ಸ್ವಾನುಭಾವ ಸಂಪನ್ನ, ಸ್ವಯಂಭು ತಾನೆ. ಅಖಂಡದಾಕಾರ ಆದಿವಸ್ತು ತಾನೆಂದರಿಯದೆ ತತ್ಪದವೆ ಲಿಂಗವೆಂದು ಬೆರತಿಪ್ಪರು ಆ ಲಿಂಗ ತಮಗೆಲ್ಲಿಯದು? ಅಸಿಪದವೆ ಲಿಂಗಾಂಗಸಂಯೋಗವೆಂಬರು. ಆ ಲಿಂಗಾಂಗಸಂಯೋಗ ತಮಗೆಲ್ಲಿಯದು? ಲಿಂಗ ತಮ್ಮದೆಂಬರು, ಪೃಥ್ವಿಯ ಹಂಗು. ಅಂಗ ತಮ್ಮದೆಂಬರು, ಅಪ್ಪುವಿನ ಹಂಗು. ಜ್ಞಾನ ತಮ್ಮದೆಂಬರು, ತೇಜದ ಹಂಗು. ಇಂತೀ ತ್ರಿವಿಧದ ಹಂಗ ಹರಿದು ಲಿಂಗವೆ ತಾನಾದ ಬಸವಣ್ಣ ಸಾಕ್ಷಿಯಾಗಿ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವಾಯಿತ್ತು.