Index   ವಚನ - 224    Search  
 
ಅಂಥ ಬ್ರಹ್ಮಾಂಡವ ಅನಂತಕೋಟಿಯನೊಳಕೊಂಡ ಇನ್ನೂರಿಪ್ಪತ್ನಾಲ್ಕು ಮಹಾಭುವನಂಗಳು ಮೊದಲಾಗಿ, ಅನಂತಕೋಟಿ ಅತಿಮಹಾಭುವನಂಗಳನೊಳಕೊಂಡುದೊಂದು ಮಹಾಬ್ರಹ್ಮಾಂಡ. ಅಂಥ ಅನಂತಕೋಟಿ ಮಹಾಬ್ರಹ್ಮಾಂಡವನೊಳಕೊಂಡುದೊಂದು ಅತಿ ಮಹಾಮೂಲ ಬ್ರಹ್ಮಾಂಡ. ಅಂಥ ಅನಂತಕೋಟಿ ಅತಿ ಮಹಾಬ್ರಹ್ಮಾಂಡವನೊಳಕೊಂಡುದೊಂದು ಪರಬ್ರಹ್ಮಾಂಡ. ಅಂಥ ಅನಂತಕೋಟಿ ಪರಬ್ರಹ್ಮಾಂಡವನೊಳಕೊಂಡುದೊಂದು ಶಿವ ಬ್ರಹ್ಮಾಂಡ. ಅಂಥ ಅನಂತಕೋಟಿ ಶಿವಬ್ರಹ್ಮಾಂಡವನೊಳಕೊಂಡುದೊಂದು ಚಿದ್ಬ್ರಹ್ಮಾಂಡ. ಅಂಥ ಅನಂತಕೋಟಿ ಚಿದ್ಬ್ರಹ್ಮಾಂಡವನೊಳಕೊಂಡುದೊಂದು ಚಿದ್ಬಿಂದು. ಅಂಥ ಚಿದ್ಬಿಂದುವನೊಳಕೊಂಡುದೊಂದು ನಾದಬ್ರಹ್ಮಾಂಡ. ಅಂಥ ಅನಂತಕೋಟಿ ನಾದಬ್ರಹ್ಮಾಂಡವನೊಳಕೊಂಡುದೊಂದು ಕಲಾ ಬ್ರಹ್ಮಾಂಡ. ಅಂಥ ಅನಂತಕೋಟಿ ಕಲಾಬ್ರಹ್ಮಾಂಡವನೊಳಕೊಂಡುದೊಂದು ಪ್ರಣವಬ್ರಹ್ಮಾಂಡ. ಅಂಥ ಅನಂತಕೋಟಿ ಪ್ರಣವಬ್ರಹ್ಮಾಂಡವೆ ಆದಿಮೂಲ ಅನಾದಿಮೂಲಂಗಳಿಗತ್ತತ್ತವಾದ ಮಹಾಮೂಲಸ್ವಾಮಿ. ಆ ಮಹಾಮೂಲಸ್ವಾಮಿಯ ಮೀರಿದ ಅತಿಮಹಾಮೂಲಸ್ವಾಮಿಗತ್ತತ್ತವಾದ ಅಖಂಡ ಮಹಾಮೂಲಸ್ವಾಮಿಯ ರೋಮಕೂಪಂಗಳು ನೋಡಾ. ಅಂಥ ಅನಂತಕೋಟಿ ಪ್ರಣವಬ್ರಹ್ಮಾಂಡದ ಪ್ರಣವಪ್ರಕಾಶಂಗಳೆ ಆ ಅಖಂಡಮೂಲಸ್ವಾಮಿಯ ರೋಮಂಗಳು ನೋಡಾ. ಆ ರೋಮಪ್ರಮಾಣಂಗಳ ಅನಂತಕೋಟಿ ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಮೊದಲಾದ ಅನಂತಕೋಟಿ ದೇವರ್ಕಳಿಹರು ನೋಡಾ. ಅನಂತಕೋಟಿ ವೇದಾಗಮಶಾಸ್ತ್ರಪುರಾಣಂಗಳೆಲ್ಲ ಅಖಂಡ ಮಹಾಮೂಲಸ್ವಾಮಿಯ ರೋಮಪ್ರಮಾಣಂಗಳ ಪ್ರಮಾಣಿಸಲರಿಯವು ನೋಡಾ ಅಪ್ರಮಾಣಕೂಡಲಸಂಗಮದೇವಾ.