Index   ವಚನ - 270    Search  
 
ಇಂತಪ್ಪ ನಾನಾ ಸುಖದುಃಖಂಗಳನುಂಡು, ಎಂತಕ್ಕೆ ನರನಾಗಿ ಬಂದು, ಪೂರ್ವಜನ್ಮಸುಕೃತಫಲದಿಂದ ಮಹಾಪುರುಷರಂ ಸಾರ್ದು ನರಕೋತ್ತರವಂ ಮಾಡಿ, ಸ್ವರ್ಗಾದಿ ಭೋಗಂಗಳನುಂಡು, ಮೇಲಣ ಮುಕ್ತಿಯ ಪಥವನು ಪಡೆದ ತೆರನಾವುದೆಂದು ವಿಚಾರಿಸಿ, ಸಕಲವೇದಾಗಮಶಾಸ್ತ್ರಪುರಾಣಂಗಳಂ ನೋಡಿ ತನ್ನಿಂದ ತಾನೆ ತಿಳಿದು ಅನಂತಕೋಟಿ ತತ್ವಂಗಳೊಳು ತೊಂಬತ್ತಾರುತತ್ತ್ವಂಗಳನರಿದು, ಆ ತೊಂಬತ್ತಾರುತತ್ತ್ವಂಗಳೊಳು ಮೂವತ್ತಾರುತತ್ತ್ವಂಗಳ ಭೇದಿಸಿ, ಆ ಮೂವತ್ತಾರು ತತ್ತ್ವಂಗಳೊಳು ತ್ವಂ ಪದ ತತ್‍ಪದ ಅಸಿಪದಂಗಳೆಂಬ ಪದತ್ರಯಂಗಳನರಿದು ಎಪ್ಪತ್ತೆರಡುಸಾವಿರ ನಾಡಿಗಳನು ಆ ಎಪ್ಪತ್ತೆರಡುಸಾವಿರ ನಾಡಿಗಳೊಳು ಮೂವತ್ತೆರಡು ನಾಡಿಗಳ ಭೇದವನು, ಆ ಮೂವತ್ತೆರಡು ನಾಡಿಗಳೊಳು ಚತುರ್ದಶನಾಡಿಗಳ ಭೇದವನು, ಆ ಚತುರ್ದಶನಾಡಿಗಳೊಳು ತ್ರಿನಾಡಿಗಳ ಭೇದವನು, ಆ ತ್ರಿನಾಡಿಗಳೊಳು ಏಕನಾಡಿಯ ಭೇದವನರಿದು ಆ ಚತುರ್ದಶನಾಡಿಗಳೊಳು ಚತುರ್ದಶವಾಯುಭೇದವನರಿದು ಆ ಚತುರ್ದಶವಾಯುವಿನೊಳು ಪಂಚವಾಯುವ ಭೇದಿಸಿ, ಪಂಚವಾಯುವಿನೊಳು ದ್ವಿವಾಯುವನರಿದು, ದ್ವಿವಾಯುವಿನೊಳು ಏಕವಾಯುವಿನ ಸಂಚವನರಿದು ಷಡುಚಕ್ರ, ದಶವರ್ಣ, ಅಕ್ಷರ, ಅಧಿದೇವತೆಗಳಂ ಭೇದಿಸಿ ಅಂತಃಕರಣಚತುಷ್ಟಯಂಗಳನರಿದು ಮಂಡಲತ್ರಯಭೇದವ ಭೇದಿಸಿ ಕಂಡನು ಕಾಣಾ ಅಪ್ರಮಾಣಕೂಡಲಸಂಗಮದೇವಾ.