Index   ವಚನ - 330    Search  
 
ಇನ್ನು ಲಿಂಗಧಾರಣಸ್ಥಲವದೆಂತೆಂದಡೆ: ಆ ಸದ್ಗುರುಸ್ವಾಮಿ ಶಿಷ್ಯನ ಏಕಭುಕ್ತೋಪವಾಸಂಗಳ ಮಾಡಿಸಿ ಪಂಚಗವ್ಯಮಂ ಕೊಟ್ಟು, ಗಣತಿಂತಿಣಿಗೆ ದೀರ್ಘದಂಡ ನಮಸ್ಕಾರವಂ ಮಾಡಿ, ದಶವಾಯು ಶುದ್ಧ, ಅಷ್ಟ ತನುಶುದ್ಧ, ಜೀವಶುದ್ಧ, ಆತ್ಮಶುದ್ಧವಂ ಮಾಡಿ, ಇಂದ್ರಿಯಲಿಖಿತವಂ ತೊಡದು ಶಿವಲಿಖಿತವಂ ಲಿಖಿಸಿ, ವಿಭೂತಿಯನಿಟ್ಟು, ಸ್ಥಾನಸ್ಥಾನದಲ್ಲಿ ರುದ್ರಾಕ್ಷೆಯಂ ಧರಿಸಿ, ಕಳಶಾಭಿಷೇಕವಂ ಮಾಡಿ, ಆ ಶಿಷ್ಯನ ಮಸ್ತಕದ ಮೇಲೆ ತಮ್ಮ ಹಸ್ತಕಮಲವನಿರಿಸಿ, ಆತನ ಬ್ರಹ್ಮರಂಧ್ರದ ಚಿತ್ಪ್ರಭಾ ಲಿಂಗಮಂ ತೆಗೆದು ಧ್ಯಾನಿಸಿ, ಆ ಶಿಷ್ಯನ ಹಸ್ತಮಂ ಪಂಚಾಮೃತದಿಂ ತೊಳೆದು, ಅಂಗದ ಮೇಲೆ ಲಿಂಗಮಂ ಪ್ರತಿಷ್ಠೆಯಂ ಮಾಡಿ ಕರ್ಣದ್ವಾರದಲ್ಲಿ ಮೂಲಮಂತ್ರಮಂ ತುಂಬಿ ಕೃತಾರ್ಥನ ಮಾಡಿದನಯ್ಯ ಎನ್ನ ಗುರು. ದೀಯತೇ ಜ್ಞಾನಸಂಬಂಧಃ ಕ್ಷೀಯತೇ ಚ ಮಲತ್ರಯಂ | ದೀಯತೇ ಕ್ಷೀಯತೇ ಚೈವ ಲಿಂಗದೀಕ್ಷಾಭಿಧೀಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.