Index   ವಚನ - 332    Search  
 
ಇನ್ನು ವಿಭೂತಿಸ್ಥಲವದೆಂತೆಂದಡೆ: ಶ್ರೀ ವಿಭೂತಿಯು ಮೊದಲಲ್ಲಿ ಗೂಢನಿರ್ನಾಮವಾಗಿದ್ದಿತ್ತು. ಎರಡನೆಯಲ್ಲಿ ಜ್ಞಾನಸ್ವರೂಪವಾಗಿದ್ದುದು, ಮೂರನೆಯಲ್ಲಿ ಜ್ಞಾನವಹನವಾಗಿದ್ದುದು. ನಾಲ್ಕನೆಯಲ್ಲಿ ಭಸ್ಮವಾಗಿ ಧರಿಸಿದರು ಶ್ರೀ ವಿಭೂತಿಯ. ಇದಕ್ಕೆ ಈಶ್ವರ ಉವಾಚ: ಪ್ರಥಮಂ ಗೂಢನಿರ್ನಾಮಂ ದ್ವಿತೀಯಂ ಚಿತ್ಸ್ವರೂಪಕಂ | ತೃತೀಯಂ ಚಿದ್ವಿಲಾಸಂ ಚ ಚತುರ್ಥಂ ಭಸ್ಮಧಾರಣಂ || ಅನಾದಿ ಶಾಶ್ವತಂ ನಿತ್ಯಂ ಚೈತನ್ಯಂ ಚಿತ್ಸ್ವರೂಪಕಂ | ಚಿದಂಗಂ ವೃಷಭಾಕಾರಂ ಚಿದ್ಭಸ್ಮಂ ಲಿಂಗಧಾರಣಂ ||'' ಇಂತೆಂದುದಾಗಿ, ಈ ಮಹಾಭಸ್ಮಕ್ಕೆ ನಮಸ್ಕಾರ ನೋಡಾ. ಭಸ್ಮ ಜ್ಯೋತಿಸ್ವರೂಪಾಯ ಶಿವಾಯ ಪರಮಾತ್ಮನೇ | ಷಟ್ತ್ರಿಂಶತತ್ವಬೀಜಾಯ ನಮಃ ಶಾಂತಾಯ ತೇಜಸೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.