Index   ವಚನ - 461    Search  
 
ಆ ಅಖಂಡ ಗೋಳಕಾಕಾರಪ್ರಣವದ ಜ್ಯೋತಿಸ್ವರೂಪದಲ್ಲಿ ಮಹಾಲಿಂಗ ಹುಟ್ಟಿತ್ತು. ಆ ಪ್ರಣವದ ದರ್ಪಣಾಕಾರದಲ್ಲಿ ಪ್ರಸಾದಲಿಂಗ ಹುಟ್ಟಿತ್ತು. ಆ ಪ್ರಣವದ ಅರ್ಧಚಂದ್ರಕದಲ್ಲಿ ಜಂಗಮಲಿಂಗ ಹುಟ್ಟಿತ್ತು. ಆ ಪ್ರಣವದ ಕುಂಡಲಾಕಾರದಲ್ಲಿ ಶಿವಲಿಂಗ ಹುಟ್ಟಿತ್ತು. ಆ ಪ್ರಣವದ ದಂಡಕಸ್ವರೂಪದಲ್ಲಿ ಗುರುಲಿಂಗ ಹುಟ್ಟಿತ್ತು. ಆ ಪ್ರಣವದ ತಾರಕಸ್ವರೂಪದಲ್ಲಿ ಆಚಾರಲಿಂಗ ಹುಟ್ಟಿತ್ತು ನೋಡಾ. ಇದಕ್ಕೆ ಶಿವಲಿಂಗಾಗಮೇ: ಓಂಕಾರ ಜ್ಯೋತಿಸ್ವರೂಪೇ ಚ ಮಹಾಲಿಂಗ ಸಮುದ್ಭವಂ | ಓಂಕಾರ ದರ್ಪಣಾಕಾರೇ ಪ್ರಸಾದಲಿಂಗಮುದ್ಭವಂ || ಓಂಕಾರೇಚಾರ್ಧಚಂದ್ರೇ ಚ ಜಂಗಮಲಿಂಗಮುದ್ಭವಂ | ಓಂಕಾರಕುಂಡಲಾಕಾರೇ ಶಿವಲಿಂಗ ಸಮುದ್ಭವಂ || ಓಂಕಾರದಂಡಕಸ್ವರೂಪೇ ಗುರುಲಿಂಗ ಸಮುದ್ಭವಂ | ಓಂಕಾರತಾರಕರೂಪೇ ಆಚಾರಲಿಂಗಮುದ್ಭವಂ | ಇತಿ ಷಷ್ಠಲಿಂಗೋತ್ಪನ್ನಂ ಸುಸೂಕ್ಷ್ಮಂ ಶೃಣು ಪಾರ್ವತಿ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.