Index   ವಚನ - 490    Search  
 
ಲಿಂಗವೆಂಬುದು ನಾದಬಿಂದುಕಲಾತೀತ. ಲಿಂಗವೆಂಬುದು ಅಖಂಡಜ್ಞಾನ. ಲಿಂಗವೆಂಬುದು ಅಖಂಡಪರಿಪೂರ್ಣ. ಲಿಂಗವೆಂಬುದು ನಿಃಶಬ್ದಬ್ರಹ್ಮ. ಲಿಂಗವೆಂಬುದು ಅಖಂಡಗೋಳಕಾಕಾರ. ಲಿಂಗವೆಂಬುದು ನಿರಾಳ ನಿರಂಜನ ನಿರಾಮಯಾತೀತ. ಲಿಂಗವೆಂಬುದು ಅತ್ಯತಿಷ್ಟರ್ದಶಾಂಗುಲವೆಂಬ ಘನಕ್ಕೆ ಘನವಾದ ಮಹಾಘನ. ಲಿಂಗವೆಂಬುದು ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಮೊದಲಾದ ಸಮಸ್ತ ದೇವರ್ಕಳ ಜನ್ಮಭೂಮಿ. ಲಿಂಗವೆಂಬುದು ಹರಿಬ್ರಹ್ಮಾದಿಗಳ ನಡುವೆ ನೆಗಳ್ದ ಜ್ಯೋತಿರ್ಮಯ. ಇದು ಲಿಂಗದ ವರ್ಮ ನೋಡಾ. ಇದಕ್ಕೆ ಮಹಾಲಿಂಗಾಗಮೇ: ಅಖಿಲಾರ್ಣವಾ ಲಯಾನಾಂ ಲಿಂಗಮುಖ್ಯಂ ಪರಂ ತಥಾ | ಪರಂ ಗೂಢಂ ಶರೀರಸ್ಥಂ ಲಿಂಗಕ್ಷೇತ್ರಮನಾದಿವತ್ | ಯಥಾಮೈಶ್ವರಂ ತೇಜಂ ತಲ್ಲಿಂಗಂ ಪಂಚಸಂಜ್ಞಕಂ ||'' ಇಂತೆಂದುದಾಗಿ. ಇದಕ್ಕೆ ಮಹಾಲಿಂಗಸೂತ್ರೇ: ಅಸಂಖ್ಯಾತ ಮಹಾವಿಷ್ಣು ಅಸಂಖ್ಯಾತ ಪಿತಾಮಹಾಃ | ಅಸಂಖ್ಯಾತ ಸೇಂದ್ರಾಣಾಂ ಲೀಯತೇ ಸರ್ವದೇವತಾಃ || ವಿಷ್ಣುಸಂಜ್ಞಾ ಅಸಂಖ್ಯಾತಾ ಅಸಂಖ್ಯಾತಾಪಿತಾಮಹಾಃ | ಅಸಂಖ್ಯಾತಾ ದೇವಮುನಯೋ ಗಮ್ಯತೇ ಸರ್ವದೇವತಾಃ || ಲೀಯತೇ ಗಮ್ಯತೇ ಯತ್ರ ಯೇನ ಸರ್ವಂ ಚರಾಚರಂ | ತದೇವ ಲಿಂಗಮಿತ್ಯುಕ್ತಂ ಲಿಂಗತತ್ವಂ ಪರಾಯಣೈಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.