Index   ವಚನ - 585    Search  
 
ಬ್ರಹ್ಮವಿಷ್ಣ್ವಾದಿಗಳು ತಾನಿರ್ದಲ್ಲಿ, ರುದ್ರ ಈಶ್ವರರು ತಾನಿರ್ದಲ್ಲಿ, ಪಂಚಮುಖ ದಶಭುಜವನುಳ್ಳ ಸದಾಶಿವ ತಾನಿರ್ದಲ್ಲಿ, ಸಹಸ್ರಶಿರ ಸಹಸ್ರಾಕ್ಷ ಸಹಸ್ರಬಾಹು ತಾನಿರ್ದಲ್ಲಿ, ಸಹಸ್ರಪಾದವನುಳ್ಳ ಪರಮಪುರುಷರು ತಾನಿರ್ದಲ್ಲಿ, ವಿಶ್ವತೋಮುಖ ವಿಶ್ವತೋಚಕ್ಷು ವಿಶ್ವತೋಬಾಹು ವಿಶ್ವತೋ ಪಾದವನುಳ್ಳ ಮಹಾಪುರುಷರು ತಾನಿರ್ದಲ್ಲಿ, ನಾಲ್ವತ್ತೆಂಟುಸಾವಿರ ಮುನಿಗಳು ತಾನಿರ್ದಲ್ಲಿ, ಮೂವತ್ತುಮೂರು ಕೋಟಿ ದೇವರ್ಕಳು ತಾನಿರ್ದಲ್ಲಿ, ತಾನೆ ಅಖಂಡ ಪರಿಪೂರ್ಣವಾಗಿಹ ಘನವಲ್ಲದೆ ತನ್ನಿಂದಧಿಕವಪ್ಪವರಾರು ಇಲ್ಲ ನೋಡಾ, ಅಪ್ರಮಾಣಕೂಡಲಸಂಗಮದೇವಾ.