Index   ವಚನ - 592    Search  
 
ಅನಂತಕೋಟಿ ಇಂದ್ರಾದಿಗಳೆಲ್ಲ ಇಂದ್ರಸಂಸಾರಕ್ಕೊಳಗಾಗಿ ತನ್ನ ತಾನರಿಯದೆ ತಾನಾರೆಂದು ತಿಳಿಯದೆ ಭವರೋಗಂಗಳಿಗೊಳಗಾಗಿ ಕೆಟ್ಟರು ನೋಡಾ. ಅನಂತಕೋಟಿ ಬ್ರಹ್ಮಾದಿಗಳೆಲ್ಲ ಬ್ರಹ್ಮಸಂಸಾರಕ್ಕೊಳಗಾಗಿ ತನ್ನ ತಾನರಿಯದೆ ತಾನಾರೆಂದು ತಿಳಿಯದೆ ಭವಸಾಗರದೊಳು ಬಿದ್ದು ಕೆಟ್ಟರು ನೋಡಾ. ಅನಂತಕೋಟಿ ವಿಷ್ಣ್ವಾದಿಗಳೆಲ್ಲ ವಿಷ್ಣು ಸಂಸಾರಕ್ಕೊಳಗಾಗಿ ತನ್ನ ತಾನರಿಯದೆ ತಾನಾರೆಂದು ತಿಳಿಯದೆ ಭವಾರಣ್ಯದೊಳು ಬಿದ್ದು ಮುಳುಗಿ ಏಳಲರಿಯದೆ ಕೆಟ್ಟರು ನೋಡಾ. ಮೀನಜ ರೋಮಜ ಚಿಪ್ಪಜ ಡೊಂಕಜ ಚಿಡುಕಜ ಸಾರಂಗನೆಂಬ ಮುನಿಗಳು ಮೊದಲಾಗಿ ಅನಂತಕೋಟಿ ಮುನಿಗಳೆಲ್ಲಾ ಮುನಿಸಂಸಾರಕ್ಕೊಳಗಾಗಿ ತನ್ನ ತಾನರಿಯದೆ ತಾನಾರೆಂದು ತಿಳಿಯದೆ ಜನನಮರಣಕ್ಕೊಳಗಾಗಿ ಕೆಟ್ಟರು ನೋಡಾ. ಮೂವತ್ಮೂರುಕೋಟಿ ದೇವರ್ಕಳು ಮೊದಲಾಗಿ ಅನಂತಕೋಟಿ ದೇವರ್ಕಳೆಲ್ಲ ದೇವಸಂಸಾರಕ್ಕೊಳಗಾಗಿ ತನ್ನ ತಾನರಿಯದೆ, ತಾನಾರೆಂದು ತಿಳಿಯದೆ ಜನನಮರಣಕ್ಕೊಳಗಾಗಿ ಕೆಟ್ಟರು ನೋಡಾ. ಇವರೆಲ್ಲ ಕೆಟ್ಟಕೇಡಿಂಗೆ ಕಡೆಯಿಲ್ಲ. ನಾಮ ರೂಪ ಕ್ರಿಯಾತೀತವಾಗಿಹ ಪರಬ್ರಹ್ಮವೇ ತಾನೆಂದು ಅರಿದ ಮಹಾಶರಣನ ಭವರೋಗಂಗಳು ಮುಟ್ಟಲಮ್ಮವು ನೋಡಾ ಅಪ್ರಮಾಣಕೂಡಲಸಂಗಮದೇವಾ.