Index   ವಚನ - 744    Search  
 
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಆತ್ಮನೆಂಬ ಷಡ್ವಿಧ ಅಂಗಂಗಳನೊಳಕೊಂಡು, ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯರೆಂಬ ಷಟ್ಸ್ಥಲವನೊಳಕೊಂಡು, ಸುಚಿತ್ತ ಸುಬುದ್ದಿ ನಿರಹಂಕಾರ ಸುಮನ ಸುಜ್ಞಾನ ಸದ್ಭಾವವೆಂಬ ಷಡ್ವಿಧ ಹಸ್ತಂಗಳನೊಳಕೊಂಡು, ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂಬ ಷಡ್ವಿಧಲಿಂಗಂಗಳನೊಳಕೊಂಡು, ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಹೃದಯವೆಂಬ ಷಡ್ವಿಧಮುಖಂಗಳನೊಳಕೊಂಡು, ಗಂಧ ರಸ ರೂಪ ಸ್ಪರ್ಶ ಶಬ್ದ ತೃಪ್ತಿಯೆಂಬ ಷಡ್ವಿಧದ್ರವ್ಯವನೊಳಕೊಂಡು, ಕೂರ್ಮನು ತನ್ನ ವಿನೋದಕ್ಕೆ ತಾ ನಡೆಯಬೇಕಾದರೆ ತಾನು ತನ್ನ ಕಾಲು ಕೈ ತಲೆ ಬಾಲವ ತೋರಿ ಅಡಗಿಸಿಕೊಂಬುದು. ಅದರ ಹಾಂಗೆ ನಿಶ್ಶಬ್ದವೆಂಬ ಪರಬ್ರಹ್ಮವು ತನ್ನ ಲೀಲಾವಿನೋದಕ್ಕೆ ತಾನು ತನ್ನ ತಾರಕಸ್ವರೂಪ ದಂಡಕಸ್ವರೂಪ ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ ಜ್ಯೋತಿಸ್ವರೂಪವ ತೋರಿ ಅಡಗಿಸಿಕೊಂಡು, ಆದಿ ಮಧ್ಯ ಅಂತ್ಯವಿಲ್ಲದೆ ದಶದಿಶೆಗಳಿಲ್ಲದೆ ಸರ್ವಶೂನ್ಯ ನಿರಾಕಾರವಾಗಿಹ ಅಖಂಡ ಪರಂಜ್ಯೋತಿರ್ಮಯಲಿಂಗವಾಗಿಹುದು ನೋಡಾ. ಇದಕ್ಕೆ ಮಹಾಲಿಂಗಾಗಮೇ: ಆದಿಮಧ್ಯಾಂತಶೂನ್ಯಂ ಚ ಶೂನ್ಯಂ ಶೂನ್ಯಂ ದಿಶೋ ದಶ | ಸರ್ವಶೂನ್ಯಂ ನಿರಾಕಾರಂ ನಿದ್ರ್ವದ್ವಂ ಪರಮಂ ಪದಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.