Index   ವಚನ - 819    Search  
 
ಆತ್ಮತತ್ವ ಇಪ್ಪತ್ತೈದು, ವಿದ್ಯಾತತ್ವ ಹತ್ತು, ಶಿವತತ್ತ್ವವೊಂದು. ಅದೆಂತೆಂದಡೆ: ಭೂತಾದಿ ಪಂಚಕಂಗಳೈದು, ಶ್ರೋತ್ರಾದಿ ಜ್ಞಾನೇಂದ್ರಿಯಂಗಳೈದು, ಶಬ್ದಾದಿ ವಿಷಯಂಗಳೈದು, ವಾಗಾದಿ ಕರ್ಮೆಂದ್ರಿಯಂಗಳೈದು, ಮನಸಾದಿ ಪಂಚಕಂಗಳೈದು, ಆತ್ಮತತ್ವ ಇಪ್ಪತ್ತೈದು, ಕರ್ಮಸಾದಾಖ್ಯ, ಮೂರ್ತಿಸಾದಾಖ್ಯ, ಅಮೂರ್ತಿಸಾದಾಖ್ಯ, ಶಿವಸಾದಾಖ್ಯ, ನಿವೃತ್ತಿಕಲೆ, ಪ್ರತಿಷ್ಠಾಕಲೆ, ವಿದ್ಯಾಕಲೆ, ಶಾಂತಿಕಲೆ, ಶಾಂತ್ಯತೀತಕಲೆ, ಇಂತು ವಿದ್ಯಾತತ್ವ ಹತ್ತು, ಶಿವತತ್ವವೊಂದು. ಇಂತು ಮೂವತ್ತಾರು ತತ್ವಂಗಳೊಳಗೆ ಶಿವತತ್ತ್ವವೆ ತತ್ಪದ, ಆತ್ಮತತ್ವವೆ ತ್ವಂಪದ, ವಿದ್ಯಾತತ್ತ್ವವೆ ಅಸಿಪದ. ಅಕಾರದಲ್ಲಿ ತತ್ವದ ಐಕ್ಯವಾಯಿತ್ತು. ಉಕಾರದಲ್ಲಿ ತ್ವಂಪದ ಐಕ್ಯವಾಯಿತ್ತು. ಮಕಾರದಲ್ಲಿ ಅಸಿಪದ ಐಕ್ಯವಾಯಿತ್ತು. ಮಕಾರ ಅಕಾರ ಉಕಾರ ಏಕಾರ್ಥವಾಗಿ ಷಟಸ್ಥಲಬ್ರಹ್ಮವೆಂಬ ಮಹಾಜ್ಯೋತಿರ್ಮಯಲಿಂಗವಾಯಿತ್ತು. ಆ ಷಟ್ಸ್ಥಲಬ್ರಹ್ಮವೆಂಬ ಮಹಾಜ್ಯೋತಿರ್ಮಯಲಿಂಗದಲ್ಲಿ ತತ್ಪದ ತ್ವಂಪದ ಅಸಿಪದ ನಿಕ್ಷೇಪವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.