ಭ್ರಮರನು ಚತುರ್ದಳಪದ್ಮದ ಮೇಲೆ ಆಡಿತ್ತು ನೋಡಾ.
ಭ್ರಮರನು ಚತುರ್ದಳಪದ್ಮದಮೇಲೆ ಆಡಿ ನೋಡಿ
ಷಡ್ದಳಪದ್ಮಕ್ಕೆ ಬಂದಿತ್ತು ನೋಡಾ.
ಭ್ರಮರನು ಷಡ್ದಳಪದ್ಮದಮೇಲೆ ಆಡಿ ನೋಡಿ
ದಶದಳಪದ್ಮಕ್ಕೆ ಬಂದಿತ್ತು ನೋಡಾ.
ಭ್ರಮರನು ದಶದಳಪದ್ಮದಮೇಲೆ ಆಡಿ ನೋಡಿ
ದ್ವಾದಶದಳಪದ್ಮಕ್ಕೆ ಬಂದಿತ್ತು ನೋಡಾ.
ಭ್ರಮರನು ದ್ವಾದಶದಳಪದ್ಮದಮೇಲೆ ಆಡಿ ನೋಡಿ
ಷೋಡಶದಳಪದ್ಮಕ್ಕೆ ಬಂದಿತ್ತು ನೋಡಾ.
ಭ್ರಮರನು ಷೋಡಶದಳಪದ್ಮದ ಮೇಲೆ ಆಡಿ ನೋಡಿ
ದ್ವಿದಳಪದ್ಮಕ್ಕೆ ಬಂದಿತ್ತು ನೋಡಾ.
ಭ್ರಮರನು ದ್ವಿದಳಪದ್ಮದ ಮೇಲೆ ಆಡಿ ನೋಡಿ
ಸಹಸ್ರದಳಪದ್ಮಕ್ಕೆ ಬಂದಿತ್ತು ನೋಡಾ.
ಭ್ರಮರನು ಸಹಸ್ರದಳಪದ್ಮದ ಮೇಲೆ ಆಡಿ ನೋಡಿ
ತ್ರಿದಳಪದ್ಮಕ್ಕೆ ಬಂದಿತ್ತು ನೋಡಾ.
ಭ್ರಮರನು ತ್ರಿದಳಪದ್ಮದ ಮೇಲೆ ಆಡಿ ನೋಡಿ
ಏಕದಳಪದ್ಮಕ್ಕೆ ಬಂದಿತ್ತು ನೋಡಾ.
ಭ್ರಮರನು ಏಕದಳಪದ್ಮದ ಮೇಲೆ ಆಡಿ ನೋಡಿ
ಕಾಳಾಂಧರಪದ್ಮಕ್ಕೆ ಬಂದಿತ್ತು ನೋಡಾ.
ಭ್ರಮರನು ಆ ಕಾಳಾಂಧರಪದ್ಮದ ಮೇಲೆ ಆಡಿ ನೋಡಿ
ಸದ್ವಾಸನೆಯ ಕೊಂಡು ಅಲ್ಲಿಯೇ ಲೀಯವಾಯಿತ್ತು ನೋಡಾ
ಅಪ್ರಮಾಣಕೂಡಲಸಂಗಮದೇವಾ.