Index   ವಚನ - 884    Search  
 
ಪರಸ್ತ್ರೀ ಪರಾರ್ಥ ಪರಾನ್ನಕ್ಕೆ ಸುಳಿವ ಅಣ್ಣಗಳು ನೀವು ಕೇಳಿರೆ. ಪರಸ್ತ್ರೀಗೆ ಚಕ್ಷುದಗ್ಧನಾಗಿರಬೇಕು ಕೇಳಿರಣ್ಣಾ. ಪರಾರ್ಥಕ್ಕೆ ಹಸ್ತದಗ್ಧವಾಗಿರಬೇಕು ಕೇಳಿರಣ್ಣಾ. ಪರಾನ್ನಕ್ಕೆ ಜಿಹ್ವೆದಗ್ಧವಾಗಿರಬೇಕು ಕೇಳಿರಣ್ಣಾ. ನಿಂದೆಸ್ತುತಿಗೆ ಕಿವುಡನಾಗಿರಬೇಕು ಕೇಳಿರಣ್ಣಾ. ಬಯಲಬ್ರಹ್ಮವ ನುಡಿವ ತರ್ಕಿಗಳ ಕಂಡಡೆ ಮಾಗಿಯ ಕೋಗಿಲೆಯಂತೆ ಮೂಗನಾಗಿರಬೇಕು ಶರಣನು ಕೇಳಿರಣ್ಣಾ , ಇವರಿಂಗೆ ಭವನಾಸ್ತಿ ನೋಡಾ ಅಪ್ರಮಾಣಕೂಡಲಸಂಗಮದೇವಾ.