Index   ವಚನ - 131    Search  
 
ಕೃತಯುಗ ತ್ರೇತಾಯುಗ ದ್ವಾಪರಯುಗ ಕಲಿಯುಗಂಗಳಲ್ಲಿ ಬಸವನೆ ಭಕ್ತ, ಪ್ರಭುವೆ ಜಂಗಮವೆಂಬುದಕ್ಕೆ ಭಾವಭೇದವಿಲ್ಲವೆಂಬುದು ತಪ್ಪದು ನೋಡಯ್ಯಾ. ಕಲಿಯುಗದಲ್ಲಿ ಶಿವಭಕ್ತಿಯನು ಪ್ರಬಲವ ಮಾಡಬೇಕೆಂದು ಮರ್ತ್ಯಲೋಕಕ್ಕೆ ಇಳಿದು, ಶೈವಾಗಮಾಚಾರ್ಯ ಮಂಡಗೆಯ ಮಾದಿರಾಜನ ಸತಿ ಮಾದಾಂಬಿಕೆಯ ಗರ್ಭದಿಂದವತರಿಸಿದ. ಬಸವಣ್ಣನೆಂಬ ನಾಮಕರಣವಂ ಧರಿಸಿ, ಕೂಡಲಸಂಗಮದೇವರ ದಿವ್ಯ ಶ್ರೀಪಾದಪದ್ಮಾರಾಧಕನಾಗಿ, ಮರ್ತ್ಯಕ್ಕೆ ಪ್ರತಿಕೈಲಾಸವೆಂಬ ಕಲ್ಯಾಣಮಂ ಮಾಡಿ, ತನ್ನ ಪರೀಕ್ಷೆಗೆ ಬಿಜ್ಜಳನೆಂಬ ಒರೆಗಲ್ಲ ಮಾಡಿ, ಆ ಸದ್ಭಕ್ತಿ ಬಿನ್ನ[ಹ]ವನು ಒರೆದೊರೆದು ನೋಡುವ ಕೊಂಡೆಯ ಮಂಚಣ್ಣಗಳ ಪುಟ್ಟಿಸಿದ ಬಸವಣ್ಣ. ಕಪ್ಪಡಿಯ ಸಂಗಯ್ಯದೇವರ ಸ್ವಹಸ್ತದಿಂದಲುಪದೇಶಮಂ ಪಡೆದು ಸರ್ವಾಚಾರಸಂಪನ್ನನಾಗಿ ಇರುತ್ತಿರೆ, ಶಿವನಟ್ಟಿದ ನಿರೂಪಮಂ ಓದಿ, ಅರವತ್ತುಕೋಟಿ ವಸ್ತುವಂ ತೆಗೆಸಿ, ಬಿಜ್ಜಳಂಗೆ ದೃಷ್ಟಮಂ ತೋರಿ, ಶಿರಪ್ರಧಾನನಾಗಿ, ಶಿವಾಚಾರ ಶಿರೋಮಣಿಯಾಗಿ, ಏಳುನೂರಯೆಪ್ಪತ್ತು ಅಮರಗಣಂಗಳಿಗೆ ಪ್ರಥಮದಂಡನಾಯಕನಾಗಿ, ಗುರುಲಿಂಗಜಂಗಮಕ್ಕೆ ತನುಮನಧನವಂ ನಿವೇದಿಸಿ, ಅನವರತ ಶಿವಗಣ ತಿಂಥಿಣಿಯೊಳು ಓಡಾಡುತ್ತಿಪ್ಪ ಆ ಬಸವಣ್ಣ, ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜಂಗಮದ ಪಾದೋದಕ ಪ್ರಸಾದದಲ್ಲಿ ನಿಯತನಾಗಿ, ಅವರವರ ನೇಮದಿಚ್ಫೆಗಳು ಸಲಿಸಿ, ಒಲಿದು ಮಾಡುವ ದಾಸೋಹದ ಪರಿಯೆಂತೆಂದಡೆ: ಹಾಲನೇಮದವರು ಹನ್ನೆರಡುಸಾವಿರ. ಘಟ್ಟಿವಾಲ ನೇಮದವರು ಹನ್ನೆರಡುಸಾವಿರ. ಪಂಚಾಮೃತಗಳ ಒಲಿದು ಲಿಂಗಕ್ಕೆ ಸಲಿಸುವ ನೇಮದವರು ಹನ್ನೆರಡುಸಾವಿರ. ಕಟ್ಟುಮೊಸರ ನೇಮದವರು ಹನ್ನೆರಡುಸಾವಿರ. ಘಟ್ಟಿದುಪ್ಪದ ನೇಮದವರು ಆರುಸಾವಿರ. ತಿಳಿದುಪ್ಪದ ನೇಮದವರು ಆರುಸಾವಿರ. ಚಿಲುಮೆಯಗ್ಘವಣಿಯ ನೇಮದವರು ಹನ್ನೆರಡುಸಾವಿರ. ಪರಡಿ ಸಜ್ಜಿಗೆಯ ನೇಮದವರು ಹನ್ನೆರಡುಸಾವಿರ ಕಟ್ಟುಮಂಡಗೆಯ ನೇಮದವರು ಹನ್ನೆರಡುಸಾವಿರ. ಎಣ್ಣೆಹೂರಿಗೆಯ ನೇಮದವರು ಹನ್ನೆರಡುಸಾವಿರ. ವಡೆ ಗಾರಿಗೆಯ ನೇಮದವರು ಹನ್ನೆರಡುಸಾವಿರ. ಹಾಲುಂಡೆ ಲಡ್ಡುಗೆಯ ನೇಮದವರು ಹನ್ನೆರಡುಸಾವಿರ. ತವರಾಜ ಸಕ್ಕರೆಯ ನೇಮದವರು ಹನ್ನೆರಡುಸಾವಿರ. ಷಡುರಸಾಯನದ ನೇಮದವರು ಹನ್ನೆರಡುಸಾವಿರ. ದ್ರಾಕ್ಷೆ ಮಾವು, ಖರ್ಜೂರ, ಹಲಸು, ದಾಳಿಂಬ ಇಕ್ಷುದಂಡ ಕದಳಿ ಮೊದಲಾದ ಫಲದ್ರವ್ಯಂಗಳ ನೇಮದವರು ಹನ್ನೆರಡುಸಾವಿರ. ಸಪ್ಪೆಯ ನೇಮದವರು ಹನ್ನೆರಡುಸಾವಿರ. ಸರ್ವದ್ರವ್ಯಂಗಳ ನೇಮದವರು ಹನ್ನೆರಡುಸಾವಿರ. ಸಮಯಾಚಾರ ಸಹಿತ ಲಿಂಗಾರ್ಚನೆ ಮಾಡುವ ನಿತ್ಯನೇಮಿಗಳು ಹದಿನಾರುಸಾವಿರ. ಇಂತು ಎಡೆಬಿಡುವಿಲ್ಲದೆ ಲಿಂಗಾರ್ಚನೆಯ ಮಾಡುವ ಜಂಗಮ ಲಕ್ಷದ ಮೇಲೆ ತೊಂಬತ್ತಾರು ಸಾವಿರ. ಆ ಬಸವಣ್ಣನ ಸಮಯಾಚಾರದಲ್ಲಿ ಕುಳ್ಳಿರ್ದು, ಲಿಂಗಾರ್ಚನೆಯ ಮಾಡುವ ಸಮಯಾಚಾರಿಗಳು ಮೂವತ್ತಾರು ಸಾವಿರ. ಅಂತು ಎರಡುಲಕ್ಷ ಮೂವತ್ತೆರಡು ಸಾವಿರ ಶಿವಗಣತಿಂಥಿಣಿಗೆ ಒಲಿದು ದಾಸೋಹಮಂ ಮಾಡುತ್ತ, ಪ್ರಸಾದ ಪಾದೋದಕದೊಳೋಲಾಡುತ್ತ, ಸುಖಸಂಕಥಾವಿನೋದದಿಂದ ಭಕ್ತಿಸಾಮ್ರಾಜ್ಯಂಗೆಯ್ವುತ್ತಿರಲು, ಶಿವಭಕ್ತಿಕುಲಕತಿಲಕ ಶಿವಭಕ್ತಿ ಶಿರೋಮಣಿಯೆಂಬ ಚೆನ್ನಬಸವಣ್ಣನವತರಿಸಿ ಶೈವಮಾರ್ಗಮಂ ಬಿಡಿಸಿ, ಪ್ರಾಣಲಿಂಗ ಸಂಬಂಧಮಂ ತೋರಿಸಿ, ಸರ್ವಾಂಗ ಶಿವಲಿಂಗ ಪ್ರಾಣಪ್ರಸಾದ ಭೋಗೋಪಭೋಗದ ಭೇದಮಂ ತೋರಿಸಿ, ದಾಸೋಹದ ನಿರ್ಣಯಮಂ ಬಣ್ಣವಿಟ್ಟು ಬೆಳಗಿ ತೋರಿ, ಪಾದೋದಕ ಪ್ರಸಾದಮಂ ಕೊಳ ಕಲಿಸಿ, ಗುರುಲಿಂಗಜಂಗಮದ ಘನಮಂ ತೋರಿಸಿ, ಶರಣಸತಿ ಲಿಂಗಪತಿಯೆಂಬುದಂ ಸಂಬಂಧಿಸಿ ತೋರಿ, ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯನೆಂಬ ಷಡುಸ್ಥಲಮಂ ಸರ್ವಾಂಗದೊಳು ಪ್ರತಿಷ್ಠಿಸಿ ತೋರಿ ಸಲಹಿದ ಚೆನ್ನಬಸವಣ್ಣನ ತನ್ನಲ್ಲಿ ಇಂಬಿಟ್ಟುಕೊಂಡು, ಅಚ್ಚಪ್ರಸಾದಿಯಾಗಿ ಸತ್ಯಪ್ರಸಾದಿಯಾಗಿ ಸಮಯಪ್ರಸಾದಿಯಾಗಿ, ಸಂತೋಷಪ್ರಸಾದಿಯಾಗಿ ಸರ್ವಾಂಗಪ್ರಸಾದಿಯಾಗಿ, ಸಮರಪ್ರಸಾದಿಯಾಗಿ, ನಿರ್ಣಯದಲ್ಲಿ ನಿಷ್ಪನ್ನನಾಗಿ, ನಿಜದಲ್ಲಿ ನಿವಾಸಿಯಾಗಿ, ನಿರಾಳಕ್ಕೆ ನಿರಾಳನಾಗಿ, ಘನದಲ್ಲಿ ಅಗಮ್ಯನಾಗಿ, ಅಖಂಡ ಪರಿಪೂರ್ಣನಾಗಿ, ಉಪಮೆಗೆ ಅನುಪಮನಾಗಿ, ವಾಙ್ಮನಕ್ಕಗೋಚರನಾಗಿ, ಭಾವ ನಿರ್ಭಾವವೆಂಬ ಬಗೆಯ ಬಣ್ಣಕ್ಕೆ ಅತ್ತತ್ತಲೆಂದೆನಿಸಿ ನಿಃಶೂನ್ಯನೆಂದೆನಿಸಿಪ್ಪ ಸಂಗನಬಸವಣ್ಣನ ತೊತ್ತಿನ ತೊತ್ತಿನ ಮರುದೊತ್ತಿನ ಮಗ ನಾನು ಕಾಣಾ ಪ್ರಭುವೆ, ಕಲಿದೇವರದೇವ.