Index   ವಚನ - 169    Search  
 
ಜಲದೈವವೆಂದಡೆ ಶೌಚವ ಮಾಡಲಿಲ್ಲ. ನೆಲದೈವವೆಂದಡೆ ಕಾಲೂರಿ ನಡೆಯಲಿಲ್ಲ. ಅಗ್ನಿದೈವವೆಂದಡೆ ತರಿದು ಮೆಲಲಿಲ್ಲ. ಅಗ್ನಿದೈವವೆಂದಡೆ ಮನೆಗಳು, ತೃಣಾದಿಗಳು ಬೆಂದು ಕೆಟ್ಟೆವೆನಲಿಲ್ಲ. ವಾಯುದೈವವೆಂದಡೆ ಕೆಟ್ಟಗಾಳಿ ಮನೆಗೆ ಬಂದಿತ್ತು, ಬಾಗಿಲಿಕ್ಕಿ ಎನಲಿಲ್ಲ. ಆಕಾಶದೈವವೆಂದಡೆ ಆಕಾಶವ ಹೊರಗುಮಾಡಿ, ಒಳಗೆ ಮನೆಯ ಕಟ್ಟಲಿಲ್ಲ. ಚಂದ್ರದೈವವೆಂದಡೆ ಶೀತಗೊಂಡು ಕೆಟ್ಟೆವೆನಲಿಲ್ಲ. ಸೂರ್ಯದೈವವೆಂದಡೆ ಉಷ್ಣಗೊಂಡು ಕೆಟ್ಟೆವೆನಲಿಲ್ಲ. ಆತ್ಮದೈವವೆಂದಡೆ ಸಾವು ಕೇಡು ಇಲ್ಲದಿರಬೇಕು. ಇದು ಕಾರಣ, ನೆಲದೈವವಲ್ಲ, ಜಲದೈವವಲ್ಲ, ಫಲದೈವವಲ್ಲ,ಅಗ್ನಿದೈವವಲ್ಲ, ವಾಯುದೈವವಲ್ಲ, ಆಕಾಶದೈವವಲ್ಲ, ಚಂದ್ರಸೂರ್ಯ ಆತ್ಮರು ದೈವವಲ್ಲ. ಕಲಿದೇವಾ, ನಿಮ್ಮ ಶರಣ ಬಸವಣ್ಣನೊಬ್ಬನೆ ದೈವವೆಂದ, ಮಡಿವಾಳನು.