Index   ವಚನ - 206    Search  
 
ನಾವು ಲಿಂಗೈಕ್ಯ, ಲಿಂಗಾನುಭಾವಿಗಳೆಂದು ಹೇಳುವ ಅಣ್ಣಗಳಿರಾ ನೀವು ಲಿಂಗೈಕ್ಯ ಲಿಂಗಾನುಭಾವಿಗಳು ಎಂತಾದಿರಿ ಹೇಳಿರಣ್ಣ. ಅರಿಯದಿರ್ದಡೆ ಗುರುಕೃಪೆಯಿಂದ ಹೇಳಿಹೆನು ಕೇಳಿರಣ್ಣ, ಲಿಂಗೈಕ್ಯ, ಲಿಂಗಾನುಭಾವದ ಭೇದಾದಿಭೇದವ. ಸರ್ವಸಂಗಪರಿತ್ಯಾಗವ ಮಾಡಬೇಕು. ಲೋಕಾಚಾರವ ಮುಟ್ಟದಿರಬೇಕು. ನುಡಿಯಂತೆ ನಡೆ ದಿಟವಾಗಬೇಕು. ಸರ್ವಾಚಾರಸಂಪತ್ತಿನಾಚರಣೆಯ, ಸದ್ಗುರು ಮುಖದಿಂದರಿತು ಆಚರಿಸಬೇಕು. ನಾನಾರು, ನನ್ನ ಜೀವವೇನು, ನಾ ಬಂದ ಮುಕ್ತಿದ್ವಾರವಾವುದು ? ನಾ ಹೋಗುವ ನಿಜಕೈವಲ್ಯಪದವಾವುದು ? ನನ್ನಿರವೇನೆಂದು ಅರಿದಾಚರಿಸಬಲ್ಲಾತನೆ, ನಿಜಲಿಂಗೈಕ್ಯ ಲಿಂಗಾನುಭಾವಿ ನೋಡಾ, ಕಲಿದೇವರದೇವ.