Index   ವಚನ - 59    Search  
 
ಆ ಪರಶಿವನೊಳಗಿರ್ದ ಜಗದಾತ್ಮನಲ್ಲಿ ತೋರುವ ಸತ್ಕರ್ಮ ದುಷ್ಕರ್ಮಕ್ಕೆ ಅಂಜಿ ಶಿವಧೋ ಶಿವಧೋ ಎಂದು ಮೊರೆಯಿಡಲು, ಶಿವ ಸಾಧುರಮುಖದಿಂದಲ್ಲಿ ಬಂದು ಗುರುವಿನ ಪಿಡಿಯೆಂದು ಹೇಳಲು, ಗುರುವೇ ಗುರುವೇ ಎಂದು ಮೊರೆಯಿಟ್ಟು ಗುರುವಿನ ಬಯಸುವ ಚಿದ್ಭ್ರಮೆ ಘಟ್ಟಿಗೊಂಡು ಮುಂದೆ ನಿಂದಿರಲು, ಆ ಮುಂದೆ ನಿಂತ ಗುರುವಿನ ಪ್ರಾರ್ಥಿಸಲು, ಆ ಶ್ರೀಗುರು ಆ ಶಿಷ್ಯನ ತನ್ನ ಕರುಣಜಲದಿಂದ ಮೈದೊಳೆದು, ವಿಭೂತಿಪಟ್ಟವ ಕಟ್ಟಿ, ರುದ್ರಾಕ್ಷಿಯ ಅಲಂಕರಿಸಿ, ಪಂಚಾಚಾರ್ಯರ ಸಾಕ್ಷಿಯಮಾಡಿ, ಶಿಕ್ಷಿಸಿ, ದೀಕ್ಷೆಯನೆಸಗಿ, ಮೋಕ್ಷದ ಹಣ್ಣಿನ ಬಯಕೆಗೆ ಬೀಜವಿದೆಯೆಂದು ಲಿಂಗವ ಕೊಟ್ಟು, ಜಂಗಮವ ಬೆರೆಸಿ, ಪಾದೋದಕವ ತರಳಿಸಿ, ಶಿವಪ್ರಸಾದವರಳಿಸಿ, ಮಂತ್ರಕಾಯವ ಮಾಡಿ, ಮುಕ್ತಿಪಕ್ವಗೈ ಎಂದು ಹೇಳಿ ಶಬ್ದಮುಗ್ಧವಾಗಲು, ಆ ಶಬ್ದಮುಗ್ಧವಾದ ಗುರುವಿನ ಹೃದಯವ ತಿಳಿಯದೇ, ತಾನ್ಯಾರೆಂಬುದನ್ನು ಅರಿಯದೆ, ಗುರುವಿನ ಹಾಡಿ ಹಾಡಿ, ವಿಭೂತಿಯ ಪೂಸಿ ಪೂಸಿ, ರುದ್ರಾಕ್ಷಿಯ ಧರಿಸಿ ಧರಿಸಿ, ಲಿಂಗವ ನೋಡಿ ನೋಡಿ, ಜಂಗಮದ ಆರಾಧನೆಯ ಮಾಡಿ ಮಾಡಿ, ಪಾದೋದಕವ ಕುಡಿದು ಕುಡಿದು, ಪ್ರಸಾದವನುಂಡುಂಡು, ಮಂತ್ರವನ್ನೋದೋದಿ, ಮಹತ್ವವ ಭ್ರಮಿಸಿ, ಮುಕ್ತಿಯ ಬಯಸಿ ಬಯಸಿ, ಕಿಸಬಾಯಿ ಆಗಿ ಆಗಿ ಹಸಗೆಟ್ಟು ಮುನ್ನಿಗಿಂ ಮಿಗಿಲಾಗಿ, ಭವಭವದಲ್ಲಿ ಮಸಿಮಣ್ಣಾದರೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.