ಹಾವು ಹುಲಿ ಕಳ್ಳರ ಭಯವೆಂದು
ಹೇಳಿದವರ ಮೇಲೆ ನೋವುಂಟೆ?
ನೋವಾದಡಾಗಲಿ, ಇದರಿಂದ ಎನಗೆ ಕೇಡಿಲ್ಲ.
ಕಂಡು ಸುಮ್ಮನಿದ್ದಡೆ, ಆ ಗುರುವಿನ ಸುಖದುಃಖ ಎನ್ನದಾಗಿ,
ಸಮಯಕ್ಕಂಜಿದಡೆ ಎನ್ನ ಮಾಡುವ ಮಾಟ ಎನ್ನ ಕೇಡು,
ಎನ್ನ ಅರಿವು ಮರವೆಯಲ್ಲಿದ್ದಡೆ, ಭವದುಃಖಕ್ಕೆ ಬೀಜ.
ಎನ್ನ ಕೈಯಲ್ಲಿ ಎನ್ನಂಗವ ತೊಳೆಯಬೇಕಲ್ಲದೆ ಅನ್ಯರಿಗೆ ಹೇಳಲೇಕಯ್ಯಾ?
ಇಂತೀ ಮೂರರೊದಗ ನಾ ಮಾಡಿ ಹಾನಿಯ ಪಡೆವುದಕ್ಕೇನು?
ಅಂದಿಗೇನಾದಡಾಗಲಿ ಇಂದಿಗೆ ಶುದ್ಧ,
ಸದಾಶಿವಮೂರ್ತಿಲಿಂಗದಲ್ಲಿ.