Index   ವಚನ - 230    Search  
 
ಗಂಧವನೊಳಕೊಂಡ ಕುಸುಮವ ಕೊಯ್ಯಬಹುದಲ್ಲದೆ ಗಂಧವನೊಳಕೊಂಡ ವಾಯುವ ಕೊಯ್ಯಬಹುದೆ? ಘಟವಕೊಳಕೊಂಡಿದ್ದಾತ್ಮನನರಿಯಬಹುದೆ, ಆತ್ಮನನೊಳಕೊಂಡಿದ್ದ ಘಟವನರಿಯಬಹುದಲ್ಲದೆ ವಸ್ತು ಅಂಗವಾದಲ್ಲಿ ಅರಿಯಬಹುದಲ್ಲದೆ ಅಂಗ ವಸ್ತುವಾದಲ್ಲಿ ಹಿಂಗಿ ಅರಿವ ಠಾವಿನ್ನಾವುದು? ಕುಸುಮಕ್ಕೆ ಕಡೆ ನಡು ಮೊದಲಲ್ಲದೆ ಗಂಧಕ್ಕೆ ಕಡೆ ನಡು ಮೊದಲುಂಟೆ? ಅರಿವುದಕ್ಕೆ, ಅರುಹಿಸಿಕೊಂಬುದಕ್ಕೆ, ಕುರುಹನರಿತಲ್ಲಿಯೆ ಸದಾಶಿವಮೂರ್ತಿಲಿಂಗವೆಂಬ ರೂಪು ನಿಂದಿತ್ತು.