Index   ವಚನ - 272    Search  
 
ಭಕ್ತಿಹೀನ ಭಕ್ತಿಯ ಮಾಡುವಲ್ಲಿ ಗುರುಲಿಂಗಜಂಗಮದ ಇರವ ಸಂಪಾದಿಸಲಿಲ್ಲ. ಭಕ್ತಿಯುಳ್ಳವ ಅರಿತು ಭಕ್ತಿಯ ಮಾಡುವಲ್ಲಿ ಗುರುವಿನಲ್ಲಿ ಗುಣವನರಸಬೇಕು, ಲಿಂಗದಲ್ಲಿ ಲಕ್ಷಣವನರಸಬೇಕು, ಜಂಗಮದಲ್ಲಿ ವಿರಕ್ತಿಯನರಸಬೇಕು ಅದೆಂತೆಂದಡೆ: ಈ ತ್ರಿವಿಧವು ತನ್ನಯ ಪ್ರಾಣವಾದ ಕಾರಣ. ಪರುಷ ಶುದ್ಧವಾಗಿಯಲ್ಲದೆ ಲೋಹದ ಕುಲವ ಕೆಡಿಸದು. ತಾ ಹಿಡಿದು ಆರಾಧಿಸುವ ವಸ್ತು ಶುದ್ಧವಾಗಿಯಲ್ಲದೆ ಪೂಜಿಸುವ ಭಕ್ತನ ಚಿತ್ತಶುದ್ಧವಿಲ್ಲ. ಸದಾಶಿವಮೂರ್ತಿಲಿಂಗ ಶುದ್ಧವಾಗಿಯಲ್ಲದೆ ಎನ್ನಂಗ ಶುದ್ಧವಿಲ್ಲ.