Index   ವಚನ - 28    Search  
 
ಶ್ರೀಗುರು ಶಿಷ್ಯಂಗೆ ಕರುಣದಿಂದ ಉಪದೇಶವ ಮಾಡಬೇಕೆಂದು ಬಂದು, ಮೂರ್ತಿಗೊಂಡು, ಆ ಶಿಷ್ಯನ ಪೂರ್ವಜನ್ಮವಂ ಕಳೆದು, ಪುನಜಾರ್ತನೆಂದೆನಿಸಿ, ಹಸ್ತಮಸ್ತಕಸಂಯೋಗವಂ ಮಾಡಿ, ವಿಭೂತಿಯ ಪಟ್ಟಮಂ ಕಟ್ಟಿ, ಕಿವಿಯಲ್ಲಿ ಕರ್ಣಮಂತ್ರಮಂ ಹೇಳಿ, ಮಾಂಸಪಿಂಡವಂ ಕಳೆದು, ಮಂತ್ರಪಿಂಡವಂ ಮಾಡಿ, ಸರ್ವಾಂಗದವಗುಣವಂ ಕಳೆದು, ಆ ಶಿಷ್ಯಂಗೆ ಉಪದೇಶವ ಮಾಡಿದ ಪರಿಯೆಂತೆಂದಡೆ: ಆದಿಲಿಂಗ ಅನಾದಿಲಿಂಗ ಪರುಷಲಿಂಗ ಅಮೃತಲಿಂಗ ಅಗೋಚರಲಿಂಗ ಅಪ್ರತಿಮಲಿಂಗ ಅನಾಮಯಲಿಂಗ ಅಭೇದ್ಯಭೇದಕಲಿಂಗ, ಅಸಾಧ್ಯಸಾಧಕಲಿಂಗ, ಇಂತಪ್ಪ ಲಿಂಗಾಕಿಂತವ ಕೊಂಡು, ಒಂದು ಇಷ್ಟಲಿಂಗವಂ ಮಾಡಿ, ಆ ಶಿಷ್ಯನ ಹಸ್ತದಲ್ಲಿ ನಿಕ್ಷೇಪವಂ ಮಾಡಿದನು ಮಹಾಶ್ರೀಗುರು. ಆ ಲಿಂಗ ಬಂದು, ಆ ಶಿಷ್ಯನ ಅಂಗವ ಸೋಂಕವ ಮುನ್ನವೆ, ಆ ಲಿಂಗ ಆ ಶಿಷ್ಯನನವಗ್ರಹಿಸಿತ್ತಯ್ಯ.ಆ ಶಿಷ್ಯನು ಆ ಗುರುವಿನ ಹಸ್ತದಲ್ಲಿ ಉಪದೇಶವಾಗದ ಮುನ್ನವೆ, ಆ ಶ್ರೀಗುರುವನು ಆ ಶಿಷ್ಯನವಗಹ್ರಿಸಿಕೊಂಡ ನೋಡಿರಯ್ಯಾ. ಅಂಗಸಂಗಿಗಳು ಹೋಗಿ ಲಿಂಗಂಸಂಗಿಗಳ ಸಂಗವ ಮಾಡಿಹೆನೆಂದು ಹೋದಡೆ,ಅಂಗಸಂಗಿಗಳ ಲಿಂಗಸಂಗಿಗಳು ಅವಗ್ರಹಿಸಿಕೊಂಡರು ನೋಡಿರಯ್ಯಾ. ಪರಿಮಳವುಳ್ಳ ಪುಷ್ಪಕ್ಕೆ ತುಂಬಿ ಬಂದು, ಪರಿಮಳವ ಕೊಂಡೆಹೆನೆಂದು ಹೋದಡೆ, ಆ ಪರಿಮಳವುಳ್ಳ ಪುಷ್ಪ ಆ ತುಂಬಿಯನವಗ್ರಹಿಸಿಕೊಂಡಿತ್ತು ನೋಡಿರಯ್ಯಾ. ಅನಲ ಸಂಗವ ವಾಯು ಮಾಡಿಹೆನೆಂದು ಹೋದಡೆ, ಆ ಅನಲನು ವಾಯುವನವಗ್ರಹಿಸಿಕೊಂಡಿತ್ತು ನೋಡಿರಯ್ಯಾ. ರೂಪು ದರ್ಪಣವ ರೂಹಿಸಿಹೆನೆಂದು ಹೋದಡೆ, ಆ ದರ್ಪಣ ಆ ರೂಪನವಗ್ರಹಿಸಿಕೊಂಡಿತ್ತು ನೋಡಿರಯ್ಯಾ. ಕಂಗಳು ಕರಸ್ಥಲದ ಲಿಂಗವ ನೋಡಿಹೆನೆಂದು ಹೋದಡೆ ಆ ಕರಸ್ಥಲದ ಲಿಂಗ ಆ ಕಂಗಳ ನುಂಗಿದ ಪರಿಯ ನೋಡಿರಯ್ಯಾ. ಸರ್ವಾಂಗಸಾಹಿತ್ಯ ಮಹಾಲಿಂಗೈಕ್ಯರ ಸಂಗವ, ನಾನು ಮಾಡಿಹೆನೆಂದು ಹೋದಡೆ, ಉರಿಯುಂಡ ಕರ್ಪುರದಂತೆ ಎನ್ನನವಗ್ರಹಿಸಿಕೊಂಡರು ಕಾಣಾ, ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಶರಣರ ನಾನು ನಂಬಿ ಕೆಟ್ಟು, ಬಟ್ಟಬಯಲಾಗಿ ಹೋದೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.