Index   ವಚನ - 1097    Search  
 
ಕಾಯವೆಂಬ ಕಂಥೆಯ ತೊಟ್ಟವರು, ಬ್ರಹ್ಮನಾಗಲಿ ವಿಷ್ಣುವಾಗಲಿ ಈಶ್ವರನಾಗಲಿ ಅಂಗಾಲ ಕಣ್ಣು ಮೈಯೆಲ್ಲಾ ಕಣ್ಣುಳ್ಳ ನಂದಿವಾಹನ ರುದ್ರನಾಗಲಿ ಗಂಗಾಧರನಾಗಲಿ ಗೌರೀಪತಿಯಾಗಲಿ ಮಾಯೆ ಕಾಡದೆ ಬಿಡಳು ನೋಡಾ! ಕಾಯವೆಂಬ ಕಂಥೆಯ ತೊಟ್ಟು ಕೈಲಾಸದಲ್ಲಿದ್ದಡೆ, ಅಗ್ಗದ ರುದ್ರರೆನ್ನ ನುಗ್ಗು ನುಗ್ಗು ಮಾಡಿ ನೆಲಕ್ಕೆ ಹಾಯ್ಕಿದಡೆ, ಬಿದ್ದು ಎದ್ದು ಬಂದು ಗುರುವಿನಿಂದ ಭವದ ಬಳ್ಳಿಯ ಹರಿದೆ ನೋಡಾ, ಹಿಂದಣ ಭವಕ್ಕಂಜಿ, ಮುಂದೆ ಪರಲೋಕದ ಗತಿಯನೊಲ್ಲೆನೆಂದು ಜರೆದು ಕಳೆದಡೆ, ಪುಣ್ಯಪಾಪಂಗಳೆರಡೂ ಹೊರಗಾದವು. ಗುಹೇಶ್ವರನೊಡ್ಡಿದ ಸಂಸಾರಸಾಗರವ ದಾಟಿ ನಿತ್ಯ ನಿಜನಿವಾಸದ ಮುಂಬಾಗಿಲ ಕಂಡು, ತಲೆವಾಗಿ ಹೊಕ್ಕೆನಯ್ಯಾ.