Index   ವಚನ - 1102    Search  
 
ಕಾಯವೆಂಬ ಮಹಾಕದಳಿಯ ಗೆಲಬಲ್ಲವರನಾರನೂ ಕಾಣೆ. ಸಂಸಾರವೆಂಬ ಸಪ್ತ ಸಮುದ್ರ ಬಳಸಿ ಬಂದಿಪ್ಪವು. ಭವವೆಂಬ ಮಹಾರಣ್ಯದೊಳು, ಜೀವನೆಂಬ ಮೃಗ ತಿರುಗುತ್ತಿಹುದು. ಪಂಚೇಂದ್ರಿಯವೆಂಬ ವಿಷದ ಮಳೆ ಸುರುವುತ್ತಿಪ್ಪುದು. ಕೋಪವೆಂಬ ಪೆರ್ಬುಲಿ ಮೊರೆವುತ್ತಿಪ್ಪುದು. ಅಷ್ಟಮದವೆಂಬ ಮದಗಜಂಗಳು ಬೀದಿವರಿಯುತ್ತಿಪ್ಪುವು. ಕಾಮವೆಂಬ ಮಾರಂಬಿನ ಸೋನೆ ಕರೆವುತ್ತಿಪ್ಪುದು. ಕೆಂಡದ ಮಳೆ-ಅಡಿಯಿಡಬಾರದು. ಮತ್ಸರವೆಂಬ ಮಹಾಸರ್ಪಂಗಳು ಕಿಡಿಯನುಗುಳುತ್ತಿಪ್ಪವು. ಆಸೆಯೆಂಬ ಪಾಪಿಯ ಕೂಸು ಹಿಸಿಹಿಸಿದು ತಿನ್ನುತ್ತಿಪ್ಪುದು. ತಾಪತ್ರಯವೆಂಬ ಕೆಂಡದ ಮಳೆ-ಅಡಿಯಿಡಬಾರದು. ಅಹಂಕಾರವೆಂಬ ಗಿರಿಗಳು ಅಡ್ಡ ಬಿದ್ದಿಪ್ಪವು. ಪಂಚಭೂತಗಳೆಂಬ ಭೂತಪ್ರೇತಂಗಳ ಭಯ-ದಿಟ್ಟಿಸಿ ನೋಡಬಾರದು. ಮಾಯೆಯೆಂಬ ರಕ್ಕಸಿ ಹಸಿಯದು ಹರಿದು ತಿನುತಿಪ್ಪಳು. ವಿಷಯವೆಂಬ ಕೂಪ-ಬಳಸಬಾರದು. ಮೋಹವೆಂಬ ಬಳ್ಳಿ-ಕಾಲ ಕುತ್ತಬಾರದು. ಲೋಭವೆಂಬ ಮಸೆದಡಾಯುಧ-ಒರೆ ಉಚ್ಚಬಾರದು. ಇಂತಪ್ಪ ಕದಳಿಯ ಹೊಗಲರಿಯದೆ ಆದಿ ದೇವತೆಗಳು ಮೊದಲಾದ ಮನುಮುನಿ ದೇವ ದಾನವ ಮಾನವರೆಲ್ಲರೂ, ಮತಿಗೆಟ್ಟು ಮರುಳಾಗಿ ಹೆರೆದೆಗೆದು ಓಡಿದರು. ಅಂಗಾಲ ಕಣ್ಣವರು ಮೈಯೆಲ್ಲ ಕಣ್ಣವರು ತಲೆಬಾಲಗೆಟ್ಟರು. ನಾನು ಈ ಕದಳಿಯ ಹೊಕ್ಕು ಹೊಯ್ದಾಡಿ, ಮುಳ್ಳು ಮುಸೆ ಮುಟ್ಟದೆ ಕಳಿವರಿದು, ಗೆಲಿದು, ಉತ್ತರಿಸಿ, ಗುಹೇಶ್ವರನೆಂಬ ಲಿಂಗದ ನಿಜಸಮಾಧಿಯಲ್ಲಿ ನಿಂದು, ಪರವಶನಾಗಿ ನಿರಾಳಕ್ಕೆ ನಿರಾಳವಾಗಿದ್ದೆನಯ್ಯಾ!