ವಚನ - 1156     
 
ಗುರುವಿಂಗೂ ಶಿಷ್ಯಂಗೂ- ಆವುದು ದೂರ? ಆವುದು ಸಾರೆ? ಎಂಬುದನು, ಆರುಬಲ್ಲರು? ಗುರುವೆ ಶಿಷ್ಯನಾದ ತನ್ನ ವಿನೋದಕ್ಕೆ, ಶಿಷ್ಯನೆ ಗುರುವಾದ ತನ್ನ ವಿನೋದಕ್ಕೆ. ಕರ್ಮವೆಂಬ ಕೌಟಿಲ್ಯ ಎಡೆವೊಕ್ಕ ಕಾರಣ, ಭಿನ್ನವಾಗಿ ಇದ್ದಿತ್ತೆಂದಡೆ, ಅದು ನಿಶ್ಚಯವಹುದೆ? ಆದಿ ಅನಾದಿಯಿಂದತ್ತತ್ತ ಮುನ್ನಲಾದ ಪರತತ್ತ್ವಮಂ ತಿಳಿದು ನೋಡಲು, ನೀನೆ ಸ್ವಯಂ ಜ್ಯೋತಿಪ್ರಕಾಶನೆಂದರಿಯಲು, ನಿನಗೆ ನೀನೆ ಗುರುವಲ್ಲದೆ ನಿನ್ನಿಂದಧಿಕವಪ್ಪ ಗುರುವುಂಟೆ? ಇದು ಕಾರಣ, ಗುಹೇಶ್ವರಲಿಂಗವು ತಾನೆ ಎಂಬುದನು ತನ್ನಿಂದ ತಾನೆ ಅರಿಯಬೇಕು ನೋಡಾ.