ವಚನ - 1399     
 
ಭಕ್ತರ ಮನೆಯೊಳಗೆ ಮನೆಕಟ್ಟಿಕೊಂಡಿಪ್ಪ ಜಂಗಮದ ಇಂಗಿತಾಕಾರವೆಂತೆಂದಡೆ, ಆ ಭಕ್ತನ ತನುಮನದೆಡೆಯಲ್ಲಿ ಮೋಹಿತನಾಗದೆ, ಹೋಹ, ಬಾಹ, ಭಕ್ತ ಜಂಗಮಕ್ಕೆ ಮಾಡುವ ದಾಸೋಹ ನೋಡಿ, ಅವರಿಗೆ ಮಾಡುವಡೆ ಎನಗೆ ಮಾಡುವ ಭಕ್ತಿಯೆಂದು ಇದ್ದ ಪರಿಯಲ್ಲಿ ಸುಖಿಸಿ, ಬಂದ ಪರಿಯಲ್ಲಿ ಪರಿಣಾಮಿಸಿ, ನಿಷ್ಕಾಮ್ಯ, ನಿಸ್ಪೃಹ, ನಿರ್ದೋಷಿಯಾಗಿ, ಕೋಪ ತಾಪವಿಲ್ಲದೆ ಭಕ್ತಿ ಜ್ಞಾನಯುಕ್ತನಾಗಿ, ಆ ಭಕ್ತನ ನಡೆ ನುಡಿಯಲ್ಲಿ ಜಡ ಹುಟ್ಟಿದರೆ ಅದಲ್ಲವೆಂದು ಕಳೆದು, ಸತ್ಯದ ಬುದ್ಧಿಗಲಿಸಿ ಸಂತೈಸಿಕೊಂಡು ಇಹುದೆ ಜಂಗಮಲಕ್ಷಣ. ಅಂಥ ಜಂಗಮನೆ ಪ್ರಾಣವಾಗಿ, ಅದರಾಜ್ಞೆಯ ಮೀರದೆ ಮನವಚನಕಾಯದಲ್ಲಿ ಉದಾಸೀನವಿಲ್ಲದೆ, ಅವರ ಕೂಡಿಕೊಂಡು ದಾಸೋಹವ ಮಾಡುವುದೆ ಭಕ್ತನ ಲಕ್ಷಣವು. ಈ ಎರಡಕ್ಕೂ ಭವಂ ನಾಸ್ತಿಯಹುದು. ಇಂತಪ್ಪ ಭಕ್ತ ಜಂಗಮದ ಸಕೀಲ ಸಂಬಂಧವ ಬಸವಣ್ಣ ಮೆಚ್ಚುವನು ಕಾಣಾ ಗುಹೇಶ್ವರಾ.