Index   ವಚನ - 738    Search  
 
ಅಕಲ್ಪಿತ ನಿತ್ಯ ನಿರಂಜನ ನಿರವಯ ನಿರಾಕಾರ ಪರಂಜ್ಯೋತಿ ಲಿಂಗದಲ್ಲಿ ಅಂತರಾತ್ಮಲಿಂಗ ಉತ್ಪತ್ತಿಯಾಯಿತ್ತು. ಆ ಅಂತರಾತ್ಮ ಲಿಂಗದಲ್ಲಿ ಜೀವಾತ್ಮಲಿಂಗ ಉತ್ಪತ್ತಿಯಾಯಿತ್ತು. ಆ ಅಂತರಾತ್ಮನೆ ಗುರು ಜೀವಾತ್ಮನೆ ಶಿಷ್ಯ, ಪರಮಾತ್ಮನೆ ಲಿಂಗ ಇದು ಪ್ರಸಿದ್ಧ ವಾಕ್ಯ ನೋಡಯ್ಯಾ. ಲಿಂಗದೊಳಗಣ ಬೀಜ ಜಂಗಮ, ಆ ಜಂಗಮದ ಪ್ರಕಾಶವೆ ಗುರು, ಆ ಜಂಗಮದ ನಿರಾಕಾರವೆ ಲಿಂಗ, ಪರಮಾತ್ಮನೆ ಪ್ರಾಣಸ್ವರೂಪವೆಂಬ ಜಂಗಮ. ಈ ಗುರು ಲಿಂಗ ಜಂಗಮವೆಂಬ ತ್ರಿವಿಧವು, ಏಕವೆಂದರಿಯದ ಕಾರಣ, ಬ್ರಹ್ಮ ಮುಂದುಗಾಣ, ಹರಿ ಹೊಲಬುಗೆಟ್ಟ, ರುದ್ರ ಧ್ಯಾನಾರೂಢನಾದ. ಇವರಂಡಜದೊಳಗಣ ಬಾಲಕರೆತ್ತ ಬಲ್ಲರು ಗುಹೇಶ್ವರಾ, ನಿಮ್ಮ ಮಹತ್ವವ?