Index   ವಚನ - 754    Search  
 
ಅಧರ ತಾಗಿದ ರುಚಿಯ, ಉದರ ತಾಗಿದ ಸುಖವ, ಲಿಂಗಾರ್ಪಿತವ ಮಾಡಿದಡೆ ಕಿಲ್ಬಿಷ ನೋಡಿರೆ. ಓಗರ ಪ್ರಸಾದವಲ್ಲ; ಪ್ರಸಾದ ಅರ್ಪಿತವಲ್ಲ. ಇದನರಿದ ಶರಣಂಗೆ ಆಚಾರವಿಲ್ಲ, ಆಚಾರವಿಲ್ಲದ ಶರಣಂಗೆ ಲಿಂಗವಿಲ್ಲ. ಲಿಂಗವಿಲ್ಲದ ಶರಣನ ನಿಲವು: ಶಿವಸಂಪತ್ತಿನಲಾದ ಉದಯ, ವಿಪರೀತ ಸುಳುಹು! ಪ್ರಕಟ ಸಂಸಾರದ ಬಳಕೆಯ ಹೊಡಕಟ್ಟಿ ಹಾಯ್ದು ನಿಬ್ಬೆರಗು ಎಸೆವುದು ಅರಿವಿನ ಘಟದಲ್ಲಿ! ಅರ್ಪಿಸಿದ ಪ್ರಸಾದವನು ಭೇದದಿಂದ ರುಚಿಸುವನಲ್ಲ ಕೇಳಿರಯ್ಯಾ. ದಿಟವ ಬಿಟ್ಟು ಸೆಟೆಯಲ್ಲಿ ನಡೆಯ ನೋಡಾ. ಇಲ್ಲದ ಲಿಂಗವನುಂಟು ಮಾಡಿ ಪೂಜಿಸುವ, ಬರಿಯ ಬಣ್ಣಕರೆಲ್ಲ ನೀವು ಕೇಳಿರೆ. ನೀವು ಪೂಜಕರಪ್ಪಿರಲ್ಲದೆ, ಗುಹೇಶ್ವರಲಿಂಗವಿಲ್ಲೆಂಬ ಶಬುದ ಸತ್ತು ಹುಟ್ಟುವರಿಗೆಲ್ಲಿಯದೊ?