Index   ವಚನ - 773    Search  
 
ಅಯ್ಯಾ! ಏಕಮುಖನಲ್ಲ ದ್ವಿಮುಖನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ತ್ರಿಮುಖನಲ್ಲ ಚತುರ್ಮುಖನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಪಂಚಮುಖನಲ್ಲ ಷಣ್ಮುಖನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಸಪ್ತಮುಖನಲ್ಲ ಅಷ್ಟಮುಖನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ನವಮುಖನಲ್ಲ ದಶಮುಖನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಜೀವಾತ್ಮನಲ್ಲ ಅಂತರಾತ್ಮನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಜಾಗ್ರನಲ್ಲ ಸ್ವಪ್ನನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ. ವಿಶ್ವನಲ್ಲ ತೈಜಸನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ. ಖೇಚರನಲ್ಲ ಭೂಚರನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಜಾರನಲ್ಲ ಚೋರನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಹಮ್ಮಿನವನಲ್ಲ ಬಿಮ್ಮಿನವನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಭುಕ್ತನಲ್ಲ ಮುಕ್ತನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ- ಇಂತು ಉಭಯವಳಿದ ಸಂಗನಬಸವಣ್ಣನ ಬೆಳಗಿನೊಳಗೆ ಮಹಾ ಬೆಳಗಾಗಿರ್ಪುದು ನೋಡಾ! ಗುಹೇಶ್ವರಲಿಂಗವು ಚೆನ್ನಬಸವಣ್ಣ.