Index   ವಚನ - 786    Search  
 
ಅಯ್ಯಾ! ದೀಕ್ಷಾಗುರು, ಶಿಕ್ಷಾಗುರು, ಜ್ಞಾನಗುರುಗಳೆಂಬ ತ್ರಿವಿಧ ಗುರುಗಳು, ಕ್ರಿಯಾಲಿಂಗ, ಜ್ಞಾನಲಿಂಗ, ಭಾವಲಿಂಗವೆಂಬ ತ್ರಿವಿಧ ಲಿಂಗಗಳು, ಸ್ವಯ, ಚರ, ಪರವೆಂಬ ತ್ರಿವಿಧ ಜಂಗಮವು- ಈ ಒಂಬತ್ತು ಆಚಾರಲಿಂಗದಲ್ಲಿ ಸಂಬಂಧವು. ಕ್ರಿಯಾಗಮ, ಭಾವಾಗಮ, ಜ್ಞಾನಾಗಮವೆಂಬ ತ್ರಿವಿಧ ಲಿಂಗಗಳು, ಸಕಾಯ, ಆಕಾಯ, ಪರಕಾಯವೆಂಬ ತ್ರಿವಿಧ ಗುರುಗಳು, ಧರ್ಮಾಚಾರ, ಭಾವಾಚಾರ, ಜ್ಞಾನಾಚಾರವೆಂಬ ತ್ರಿವಿಧ ಜಂಗಮವು- ಈ ಒಂಬತ್ತು ಗುರುಲಿಂಗದಲ್ಲಿ ಸಂಬಂಧವು. ಕಾಯಾನುಗ್ರಹ, ಇಂದ್ರಿಯಾನುಗ್ರಹ, ಪ್ರಾಣಾನುಗ್ರಹವೆಂಬ ತ್ರಿವಿಧ ಗುರುಗಳು ಕಾಯಾರ್ಪಿತ, ಕರಣಾರ್ಪಿತ, ಭಾವಾರ್ಪಿತವೆಂಬ ತ್ರಿವಿಧ ಲಿಂಗಗಳು, ಶಿಷ್ಯ, ಶುಶ್ರೂಷ, ಸೇವ್ಯವೆಂಬ ತ್ರಿವಿಧ ಜಂಗಮವು - ಈ ಒಂಬತ್ತು ಶಿವಲಿಂಗದಲ್ಲಿ ಸಂಬಂಧವು. ಈ ಮೂರು ಸ್ಥಲವು ಅನಾದಿಭಕ್ತನ ಮಾರ್ಗಕ್ರಿಯಾ ಸ್ವರೂಪ. ಜೀವಾತ್ಮ, ಅಂತರಾತ್ಮ, ಪರಮಾತ್ಮವೆಂಬ ತ್ರಿವಿಧಲಿಂಗಗಳು: ನಿರ್ದೇಹಾಗಮ, ನಿರ್ಭಾವಾಗಮ, ನಷ್ಟಾಗಮವೆಂಬ ತ್ರಿವಿಧ ಗುರುಗಳು; ಆದಿಪ್ರಸಾದಿ, ಅಂತ್ಯಪ್ರಸಾದಿ, ಸೇವ್ಯ ಪ್ರಸಾದಿಯೆಂಬ ತ್ರಿವಿಧ ಜಂಗಮವು- ಈ ಒಂಬತ್ತು ಜಂಗಮಲಿಂಗದಲ್ಲಿ ಸಂಬಂಧವು. ದೀಕ್ಷಾಪಾದೋದಕ, ಶಿಕ್ಷಾಪಾದೋದಕ, ಜ್ಞಾನಪಾದೋದಕವೆಂಬ ತ್ರಿವಿಧ ಲಿಂಗಂಗಳು, ಕ್ರಿಯಾನಿಷ್ಠ, ಭಾವನಿಷ್ಠ, ಜ್ಞಾನನಿಷ್ಠಯೆಂಬ ತ್ರಿವಿಧ ಗುರುಗಳು, ಪಿಂಡಾಕಾಶ, ಬಿಂದ್ವಾಕಾಶ, ಮಹದಾಕಾಶವೆಂಬ ತ್ರಿವಿಧ ಜಂಗಮವು- ಈ ಒಂಬತ್ತು ಪ್ರಸಾದಲಿಂಗದಲ್ಲಿ ಸಂಬಂಧವು. ಕ್ರಿಯಾಪ್ರಕಾಶ, ಭಾವಪ್ರಕಾಶ, ಜ್ಞಾನಪ್ರಕಾಶವೆಂಬ ತ್ರಿವಿಧ ಲಿಂಗಗಳು ಕೊಂಡದ್ದು ಪ್ರಸಾದ, ನಿಂದದ್ದು ಓಗರ, ಚರಾಚರನಾಸ್ತಿಯೆಂಬ ತ್ರಿವಿಧ ಗುರುಗಳು, ಭಾಂಡಸ್ಥಲ, ಭಾಜನಸ್ಥಲ, ಅಂಗಲೇಪನಸ್ಥಲವೆಂಬ ತ್ರಿವಿಧ ಜಂಗಮವು- ಈ ಒಂಬತ್ತು ಮಹಾಲಿಂಗದಲ್ಲಿ ಸಂಬಂಧವು. ಈ ಮೂರು ಸ್ಥಲವು ಅನಾದಿ ಜಂಗಮದ ಮೀರಿದ ಕ್ರಿಯಾ ಸ್ವರೂಪವು. ಈ ಉಭಯಂ ಕೂಡಲು ಐವತ್ತುನಾಲ್ಕು ಸ್ಥಲಂಗಳಾದವು. ಮುಂದುಳಿದ ಮೂರು ಸ್ಥಲಂಗಳಲ್ಲಿ ಭಾವಾಭಾವನಷ್ಟಸ್ಥಲವೆ ಮೂಲ ಗುರುಸ್ವರೂಪವಾಗಿ, ಹದಿನೆಂಟು ಗುರುಸ್ಥಲಂಗಳನೊಳಕೊಂಡು ಕ್ರಿಯಾಗುರುಲಿಂಗ ಜಂಗಮ ಸ್ವರೂಪವಾದ ಇಷ್ಟಮಹಾಲಿಂಗದ ಅಧೋಪೀಠಿಕೆಯೆಂಬ ಹಲ್ಲೆಯಲ್ಲಿ ಸ್ಪರ್ಶನೋದಕ, ಅವಧಾನೋದಕ, ಗುರುಪಾದೋದಕ, ಅಪ್ಯಾಯನಪ್ರಸಾದ, ಸಮಯಪ್ರಸಾದ, ಗುರುಪ್ರಸಾದ, ಆದಿ ಪ್ರಸಾದ, ನಿಚ್ಚಪ್ರಸಾದವಾಗಿ ತೆರಹಿಲ್ಲದೆ ಒಪ್ಪುತ್ತಿರ್ಪುದು ನೋಡಾ! ಜ್ಞಾನಶೂನ್ಯಸ್ಥಲವೆ ಮೂಲ ಜಂಗಮಸ್ವರೂಪವಾಗಿ ಹದಿನೆಂಟು ಚರಸ್ಥಲಂಗಳನೊಳಕೊಂಡು ಮಹಾಜ್ಞಾನಗುರುಲಿಂಗಜಂಗಮ ಸ್ವರೂಪವಾದ ಇಷ್ಟಮಹಾಲಿಂಗದ ಜಲರೇಖೆಯನ್ನುಳ್ಳ ಪಾನಿವಟ್ಟಲಲ್ಲಿ ಪರಿಣಾಮೋದಕ, ನಿರ್ನಾಮೋದಕ, ಜಂಗಮಪಾದೋದಕ, ನಿತ್ಯೋದಕ, ಸಮತಾಪ್ರಸಾದ, ಪ್ರಸಾದಿಯ ಪ್ರಸಾದ, ಜಂಗಮ ಪ್ರಸಾದ, ಸದ್ಭಾವ ಪ್ರಸಾದ, ಜ್ಞಾನಪ್ರಸಾದ, ಸೇವ್ಯ ಪ್ರಸಾದ, ಅಚ್ಚ ಪ್ರಸಾದವಾಗಿ ತೆರಹಿಲ್ಲದೆ ಒಪ್ಪುತಿರ್ಪುದು ನೋಡಾ! ಸ್ವಯ ಪರವರಿಯದ ಸ್ಥಲವೆ ಮೂಲಲಿಂಗಸ್ವರೂಪವಾಗಿ ಹದಿನೆಂಟು ಲಿಂಗಸ್ಥಲಂಗಳನೊಳಕೊಂಡು ಜ್ಞಾನಗುರುಲಿಂಗ ಜಂಗಮ ಸ್ವರೂಪವಾದ ಇಷ್ಟಮಹಾಲಿಂಗದ ಉನ್ನತವಾದ ಗೋಲಕದಲ್ಲಿ ಅಪ್ಯಾಯನೋದಕ, ಹಸ್ತೋದಕ, ಲಿಂಗಪಾದೋದಕ, ಪಂಚೇಂದ್ರಿ[ಯ] ವಿರಹಿತಪ್ರಸಾದ, ಕರಣಚತುಷ್ಟಯವಿರಹಿತ ಪ್ರಸಾದ, ಲಿಂಗಪ್ರಸಾದ ಅಂತ್ಯಪ್ರಸಾದ ಸಮಯಪ್ರಸಾದವಾಗಿ ತೆರಹಿಲ್ಲದೆ ಒಪ್ಪುತ್ತಿರ್ಪುದು ನೋಡ! ಇಂತಪ್ಪ ಲಿಂಗಜಂಗಮದ ಪಾದೋದಕ ಪ್ರಸಾದವ ಸ್ವೀಕರಿಸಿದಂಥ ಜಂಗಮಭಕ್ತರಾದ ಸಹಜಭಕ್ತರೆ ಪ್ರಸಾದಪಾದೋದಕ ಸಂಬಂಧಿಗಳು. ಇವರು ಸ್ವೀಕರಿಸಿದಂಥ ಪಾದೋದಕವೆ ನೇತ್ರದಲ್ಲಿ ಕರುಣಜಲ, ವಾಕಿನಲ್ಲಿ ವಿನಯಜಲ, ಅಂತರಂಗದಲ್ಲಿ ಸಮತಾಜಲ- ಇಂತೀ ತ್ರಿವಿಧೋದಕವೆ ಘಟ್ಟಿಗೊಂಡು ಸಾಕಾರವಾಗಿ, ತಿಳಿದುಪ್ಪ ಹೆರೆದುಪ್ಪವಾದಂತೆ ಇಷ್ಟ ಮಹಾಲಿಂಗಕ್ಕೆ ತ್ಯಾಗಾಂಗವಾದ ಶುದ್ಧ ಪ್ರಸಾದವಾಗಿರ್ಪುದಯ್ಯ; ಪ್ರಾಣಲಿಂಗಕ್ಕೆ ಭೋಗಾಂಗವಾದ ಸಿದ್ಧ ಪ್ರಸಾದವಾಗಿರ್ಪುದಯ್ಯ. ಭಾವಲಿಂಗಕ್ಕೆ ಯೋಗಾಂಗವಾದ ಪ್ರಸಿದ್ಧ ಪ್ರಸಾದವಾಗಿರ್ಪುದಯ್ಯ. ಇಂತೀ ತ್ರಿವಿಧ ಪ್ರಸಾದಪಾದೋದಕವೆ ಶರಣನ ಶುದ್ಧ ಪ್ರಸಾದವೆ ಜಿಹ್ವೆಯಲ್ಲಿ ಅಚ್ಚಪ್ರಸಾದವಾಗಿರ್ಪುದಯ್ಯ, ಸಿದ್ಧಪ್ರಸಾದವೆ ಪಾದದಲ್ಲಿ ಸಮಯ ಪ್ರಸಾದವಾಗಿರ್ಪುದಯ್ಯ. ಇಂತಪ್ಪ ಶರಣಸ್ವರೂಪವಾದ ಜ್ಞಾನಲಿಂಗಜಂಗಮದ ತೀರ್ಥಪ್ರಸಾದ ಸ್ವರೂಪವನ್ನು ಅರಿಯದೆ, ಕ್ರಿಯಾ `ಜಂಗಮಲಿಂಗ'ದ ತೀರ್ಥಪ್ರಸಾದವನ್ನು ತೆಗೆದುಕೊಳ್ಳಬಹುದು. ಜ್ಞಾನಲಿಂಗಜಂಗಮ ತೀರ್ಥಪ್ರಸಾದವನ್ನು ತೆಗೆದುಕೊಳ್ಳಲಾಗದು ಎಂಬ ಅಜ್ಞಾನಿಗಳ ಎನಗೆ ತೋರದಿರಾ! ಗುಹೇಶ್ವರಾ!