ವಚನ - 785     
 
ಅಯ್ಯಾ! ದರಿದ್ರನಲ್ಲ ಧನಿಕನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ ಕುಚಿತ್ತದವನಲ್ಲ ಸುಚಿತ್ತದವನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ ಕುಬುದ್ಧಿಯವನಲ್ಲ ಸುಬುದ್ಧಿಯವನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಅಹಂಕಾರಿಯಲ್ಲ ನಿರಹಂಕಾರಿಯಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಕುಮನದವನಲ್ಲ ಸುಮನದವನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಅಜ್ಞಾನದವನಲ್ಲ ಸುಜ್ಞಾನದವನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ದುರ್ಭಾವದವನಲ್ಲ ಸದ್ಭಾವದವನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಸಕಲನಲ್ಲ ನಿಃಕಲನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಅರ್ಪಿತನಲ್ಲ ಅನರ್ಪಿತನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ. ಆಹ್ವಾನನಲ್ಲ ವಿಸರ್ಜನನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ. ಇಂತು ಉಭಯವಳಿದು ಬೆಳಗುವ ಸಂಗನಬಸವಣ್ಣನ ಕರನಯನದಲ್ಲಿ ಝಗಝಗಿಸುವ ಗುಹೇಶ್ವರಲಿಂಗವು ತಾನೆ ನೋಡಾ! ಚೆನ್ನಬಸವಣ್ಣಾ.