ವಚನ - 789     
 
ಅಯ್ಯಾ! ನಾಟಕನಲ್ಲ ಬೂಟಕನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಶೀಲಿಗನಲ್ಲ ಕಪಟನಾಟಕನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ರುಂಡಮಾಲಿಗನಲ್ಲ ಗುಂಡುಗಾಸಿಗನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಪುಲಿಚರ್ಮನಲ್ಲ ಗಜಚರ್ಮನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ದಕ್ಷಾಧ್ವರ ಸಂಹರನಲ್ಲ ತ್ರಿಪುರಾರಿಯಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ನಂದಿವಾಹನನಲ್ಲ ಭೃಂಗಿಸ್ತುತನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಸರ್ಪಧರನಲ್ಲ ಚಂದ್ರಶೇಖರನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಗಂಗಾಧರನಲ್ಲ ಗೌರಿಪ್ರಿಯನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಗಿರಿಜಾ ವಲ್ಲಭನಲ್ಲ ಪಾರ್ವತಿಪ್ರಿಯನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಯೋಗಿಯಲ್ಲ ಜೋಗಿಯಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಶ್ರವಣನಲ್ಲ ಸನ್ಯಾಸಿಯಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಕಾಳಾಮುಖಿಯಲ್ಲ ಪಾಶುಪತಿಯಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಇಂತು ಉಭಯವಳಿದ ಸಂಗನಬಸವಣ್ಣನ ಸರ್ವಾಂಗದಿ ಬೆಳಗುವ ಮಹಾಜ್ಯೋತಿ ತಾನೆ ನೋಡಾ! ಗುಹೇಶ್ವರಲಿಂಗವು ಚೆನ್ನಬಸವಣ್ಣ.