ವಚನ - 811     
 
ಅಯ್ಯಾ! ಸಪ್ತಧಾತುವಿನ ಸಪ್ತವ್ಯಸನವನಳಿದು, ಜೀವನ ಸಂಕಲ್ಪ-ವಿಕಲ್ಪ ಆಸೆ-ಆಮಿಷಂಗಳ ಹೊಟ್ಟುಮಾಡಿ ತೂರಿ, ಹಿಂದೆ ಹೇಳಿದ ಭಕ್ತಸ್ಥಲದಲ್ಲಿ ನಿಂದು ನಿರ್ವಂಚಕನಾಗಿ ಪಾತಕಸೂತಕಗಳ ಪರಿದು ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ಅವಿರಳಪರಂಜ್ಯೋತಿಮೂರ್ತಿಯಾಗಿ ಪ್ರಜ್ವಲಿಸುವ ಸದ್ವೀರ ಮಾಹೇಶ್ವರನಂತರಂಗದಲ್ಲಿ ಪರಮಾನಂದ ಲೀಲೆಯಿಂ ಇಪ್ಪತ್ತೈದು ತತ್ತ್ವಂಗಳನೊಳಕೊಂಡು ಹದಿನೆಂಟು ಸ್ಥಲಂಗಳ ಗರ್ಭೀಕರಿಸಿಕೊಂಡು, ಎರಡು ಸಾವಿರದ ಐನೂರ ತೊಂಬತ್ತೆರಡು ಮಂತ್ರಮಾಲೆಗಳ ಪಿಡಿದುಕೊಂಡು ಇಪ್ಪತ್ತುನಾಲ್ಕು ಸಕೀಲಗರ್ಭದಿಂ, ಗುರುಮುಟ್ಟಿ ಗುರುವಾದ ಗುರುವಿಂಗೆ ಎಂಬ ಎರಡೆಂಬತ್ತೆಂಟು ಕೋಟಿ ವಚನಾನುಭಾವವ ಸ್ವಾನುಭಾವಜ್ಞಾನದಿಂದರಿದು, ಪುಷ್ಪ ಪರಿಮಳ [ಜ್ಯೋತಿ] ಪ್ರಕಾಶದಂತೆ ಏಕರೂಪಿನಿಂದ ಮಂತ್ರಮೂರ್ತಿ ಗುರುಲಿಂಗವಾಗಿ [ನೆಲಸಿರ್ಪುದು] ನೋಡ, ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು ಚೆನ್ನಬಸವಣ್ಣ.