Index   ವಚನ - 814    Search  
 
ಅಯ್ಯಾ! ಸಮಸ್ತಲೋಕದ ಅಹಂ-ಮಮತೆಯೆಂಬ ಮೂಲಾಹಂಕಾರಂಗಳ ಪಾವುಗೆಯ ಮಾಡಿ ಮೆಟ್ಟಿನಿಂದು, ಸರ್ವಾಂಗದಲ್ಲಿ ಚಿದ್ವಿಭೂತಿರುದ್ರಾಕ್ಷೆಮಂತ್ರ, ಜ್ಞಾನ, ಕ್ರಿಯಾಪಾದೋದಕ ಪ್ರಸಾದಭಕ್ತಿಯೆ ಅಂಗ ಮನ ಪ್ರಾಣ ಭಾವ ಇಂದ್ರಿಯಂಗಳಾಗಿ, ಹಿಂದೆ ಹೇಳಿದ ಸದ್ಭಕ್ತ-ಮಹೇಶ್ವರ-ಪ್ರಸಾದಿ ಪ್ರಾಣಲಿಂಗ-ಶರಣ-ಐಕ್ಯಸ್ಥಲಂಗಳ ತನ್ನೊಳಗು ಮಾಡಿಕೊಂಡು, ಮೇಲಾದ ನಿರಾಲಂಬಸ್ಥಲದಲ್ಲಾಚರಿಸುವ ಶರಣನಂತರಂಗದಲ್ಲಿ ಅಣುವಿಂಗೆ ಅಣುವಾಗಿ, ಮಹತ್ತಿಂಗೆ ಮಹತ್ತಾಗಿ ನೂರೊಂದು ಸ್ಥಲಂಗಳ ಕರತಳಾಮಳಕವಾಗಿ ಇಪ್ಪತ್ತೊಂದು ಸಾವಿರದ [ಆ]ರುನೂರು ಮಂತ್ರಮಾಲಿಕೆಗಳ ಪಿಡಿದುಕೊಂಡು ಇನ್ನೂರ ಹದಿನಾರು ಸಕೀಲಗರ್ಭದಿಂ ಪರಿಮಳ ಪರಿಮಳ ಕೂಡಿ ಭಿನ್ನದೋರದ ಹಾಂಗೆ ಏಕಸ್ವರೂಪಿನಿಂದೆ ದೀಕ್ಷಾ-ಶಿಕ್ಷಾ-ಮೋಕ್ಷಕಾರಣಾವತಾರಮೂರ್ತಿ ನಿಃಕಳಲಿಂಗವಾಗಿ ನೆಲಸಿರ್ಪುದು ನೋಡ! ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು, ಚೆನ್ನಬಸವಣ್ಣ.