ವಚನ - 895     
 
ಆದಿಯಾಧಾರವಿಲ್ಲದ ಆಗಮನಾಸ್ತಿಯಾಗಿಪ್ಪ ಸಾಗರ ವಿರಹಿತನನಾರೂ ಅರಿಯರಲ್ಲಾ! ದಶಮುಖಮಾಣಿಕದೆಸಳಗಂಗಳು ಪರ್ಬಿ ಪಸರಿಸಿದುದನಾರೂ ಅರಿಯರಲ್ಲಾ! ಪಿರಿದೊಂದು ವೃಕ್ಷವು ಅತಿಶಯದ ರೂಪಾಗಿ ಪೃಥ್ವಿಗಿಂಬಾದುದನಾರೂ ಅರಿಯರಲ್ಲಾ! ಅಂತರಂಗದ ಭುವನವ ಮೆಟ್ಟಿ ನೋಡುತ್ತಿಪ್ಪ, ಬೆಡಗಿನ ತಾವರೆಯ ಮಧ್ಯದ ತಾರಕಿಯನಾರೂ ಅರಿಯರಲ್ಲಾ! ರವಿ-ಶಶಿಗಳಿಬ್ಬರು, ನಯನ ನೋಟದ ಪುಷ್ಪಪರಿಮಳವಾಗಿರ್ದುದನಾರೂ ಅರಿಯರಲ್ಲಾ! ಇಂಬು ನಯನದಲ್ಲಿ ಸಂಭ್ರಮವಿಲ್ಲದ ರೂಪು, ಮಹತ್ತಾಗಿರ್ದುದನಾರೂ ಅರಿಯರಲ್ಲಾ! ಸಾಗರದೊಳಗಣ ಜ್ಯೋತಿಯಂತೆ, ಗುಹೇಶ್ವರಲಿಂಗದೊಳಗೆ ಎನ್ನ ಪರಮಾರಾಧ್ಯ ಸಂಗನಬಸವಣ್ಣ[ನು], ನಿಂದ ನಿಲವ ಉಪಮಿಸಬಾರದು ಕಾಣಾ ಸಿದ್ಧರಾಮಯ್ಯಾ.