Index   ವಚನ - 919    Search  
 
ಆ ಶಿಷ್ಯನ ಕರಣದ ಮೇಲಣ ಪೂರ್ವಾಶ್ರಯವ ಕಳೆದೆವೆಂದು ಹೂಸಿ ಹುಂಡನ ಮಾಡಿ ಗುರುವಿನ ಕೈ ಮುಟ್ಟೆ ಹೋಯಿತ್ತೆಂಬ ಸಂದಣಿಯಲ್ಲಿ ಹೋಗದು ನಿಲ್ಲು. ಪಂಚೇಂದ್ರಿಯದ ಮೇಲಣ ಇಂದ್ರಿಯಲಿಕ್ತವ ತೊಡೆದು, ಲಿಂಗಲಿಕ್ತವ ಮಾಡುವಡೆ ಶಿಷ್ಯನ ಕೈಯಲಲ್ಲದೆ, ಗುರವಿನ ಕೈಯಲಾಗದು ನಿಲ್ಲು. ಪಂಚೇಂದ್ರಿಯ ಪ್ರಾಣ ಸಂಯೋಗದಲ್ಲಿ ಭವಿಗೆ ಮಾಡಿದ ಬೋನವನು ಭಕ್ತನ ಕಾಣಲೀಯದೆ ಮಾಡುವುದು ಸಯಿದಾನ. ಲಿಂಗವಿಲ್ಲದ ಗುರು, ಗುರುವಿಲ್ಲದ ಶಿಷ್ಯ, ಒಂದಕ್ಕೊಂದಿಲ್ಲದ ಗುಹೇಶ್ವರಾ ನಿಮ್ಮ ಶರಣನ ನಿಲವ ಚೆನ್ನಬಸವಣ್ಣ ಬಲ್ಲನು.