Index   ವಚನ - 13    Search  
 
ಅರಿದೆಹೆ ಅರುಹಿಸಿಕೊಂಡೆಹೆನೆಂಬ ಉಭಯವುಳ್ಳನ್ನಕ್ಕ, ಆ ಗುಣ ಅರಿವೋ, ಮರವೆಯೋ ಎಂಬುದ ತಿಳಿವುದು ಅದೇನು ಹೇಳಾ ? ಕ್ರೀ ಉಳ್ಳನ್ನಕ್ಕ ನಿಃಕ್ರೀ ಕುರುಹುಗೊಂಡಿತ್ತು. ಅರಿವುಳ್ಳನ್ನಕ್ಕ ಅಜ್ಞಾನ ಒಡಲುಗೊಂಡಿತ್ತು. ತಮವುಳ್ಳನ್ನಕ್ಕ ಆ ಬೆಳಗು ತಮಕ್ಕೊಳಗಾಯಿತ್ತು. ಅದೆಂತೆಂದಡೆ: ವಾಯುವ ಬೆಂಬಳಿಯಲ್ಲಿ ಗಂಧಸ್ವರೂಪವಾದಂತೆ, ಆವಾವ ಕುಸುಮದ ಗಂಧವ ವಾಯು ತಾ ಬೆರೆದಲ್ಲಿ, ಬಂಧವಿಲ್ಲದ ತೆರದಂತೆ. ಅರಿವುದು, ಅರುಹಿಸಿಕೊಂಬುದು ಎರಡಳಿದಲ್ಲಿ, ಕುರುಹೆಂದು ಪ್ರಮಾಣಿಸುವುದಕ್ಕೆ, ಅರಿವೆಂದು ಕೂಡುವುದಕ್ಕೆ, ಆ ಉಭಯದ ಎಡೆಯ ಹೇಳಾ. ಕ್ರೀಯಿಂದ ಕಾಬ ಮುಕ್ತಿ, ಜ್ಞಾನದಿಂದ ಕಾಬ ನಿರವಯ. ಆ ಗುಣ, ಶುಕ್ತಿಯಲ್ಲಿ ಅಡಗಿಪ್ಪ ಅಪ್ಪುವಿನಂತೆ, ಒಪ್ಪಕ್ಕೆ ತಾನಾಗಿ ಕುಕ್ಕಿದಡೆ, ಅಪ್ಪುವೆಂಬ ನಾಮಕ್ಕೆ ಸಿಕ್ಕಿಲ್ಲದೆ ನಿಶ್ಚಯವಾದುದು. ನೀರು ಸಾರ ಕೂಡಿದಲ್ಲಿ, ಏರ ಕಾಸಲಿಕ್ಕೆ ನೀರರತು ಸಾರ ಉಳಿದಂತೆ, ಸಾರ ನೀರಿಂದ ಕುರುಹುಗೊಂಡಿತ್ತು. ಆ ನೀರೆ ಸಾರವಾದಲ್ಲಿ, ಕೂಡಿ ಸವಿಯೆಂಬ ನಾಮವಾಯಿತ್ತು. ಸವಿ ಸಾರ ಕೂಡಿ ಅಂಗದ ಮೇಲೆ ರೂಪವಾಯಿತ್ತು. ನುಂಗಿದ ಮತ್ತೆ ಸವಿಸಾರ ಒಂದೂ ಇಲ್ಲ. ಅಂಗವೆಂಬನ್ನಕ್ಕ ಲಿಂಗ, ಲಿಂಗವೆಂಬನ್ನಕ್ಕ ಅಂಗ. ಉಭಯದ ಸಂಗವ ಜಡನೆಂದು ನುಂಗಿದ ಮತ್ತೆ, ಆತ್ಮಂಗೆ ಬಂಧ ಮೋಕ್ಷವೆಂಬುದೊಂದೂ ಇಲ್ಲ. ಕಾಮಧೂಮ ಧೂಳೇಶ್ವರನೆಂದು ಎನಲಿಲ್ಲ.