Index   ವಚನ - 81    Search  
 
ಬ್ರಹ್ಮ ಪ್ರಳಯವಾದಲ್ಲಿ, ವಿಷ್ಣು ಪ್ರಳಯವಾದಲ್ಲಿ, ರುದ್ರ ಅರ್ಧನಾರೀಶ್ವರನಾಗಿ, ದೇವಕಾಂತಿ ಕಾಂತೆಯರಲ್ಲಿ ಉಳಿಯಿತ್ತು. ತ್ರಿವಿಧಮೂರ್ತಿ ತ್ರಿವಿಧದಿಂದ ಕೆಟ್ಟ ಮತ್ತೆ ಅರಿವಲ್ಲಿ, ಆದಿಶೂನ್ಯ ಬ್ರಹ್ಮಪದವಾಯಿತ್ತು, ಭೇದಶೂನ್ಯ ವಿಷ್ಣುಪದವಾಯಿತ್ತು. ಅನಾದಿಶೂನ್ಯ ರುದ್ರಪದವಾಗಿ ಭೇದಿಸಿ ತಿರುಗುವಲ್ಲಿ, ಸ್ಥೂಲದಲ್ಲಿ ತೋರುವ ಶೂನ್ಯ ಅಂಧಕಾರವಾಗಿಪ್ಪುದು. ಸೂಕ್ಷ್ಮದಲ್ಲಿ ತೋರುವ ಶೂನ್ಯ, ದಿವಾರಾತ್ರೆಯಂತೆ ಉಭಯವ ಕೂಡಿಕೊಂಡಿಪ್ಪುದು. ಕಾರಣದಲ್ಲಿ ತೋರುವ ಶೂನ್ಯ, ಘಟಪಟವ ಗರ್ಭೀಕರಿಸಿಕೊಂಡಿಪ್ಪುದು. ಇಂತೀ ಶೂನ್ಯ ನಾಮರೂಪ ನಿಃಶೂನ್ಯ ನಿರಾಲಂಬ ಕುಂದದ ಬೆಳಗು ನುಂಗಿತ್ತು. ನುಂಗಿದ ಘನಲಿಂಗವೆಂದು ಪ್ರಮಾಣಿಸಲಿಲ್ಲ, ಕಾಮಧೂಮ ಧೂಳೇಶ್ವರವೆಂದೆನಲಿಲ್ಲ.