Index   ವಚನ - 32    Search  
 
ವರ್ತಮಾನವೇ ಸ್ಥೂಲವು, ಭೂತಕಾಲವೇ ಸೂಕ್ಷ್ಮವು, ಭವಿಷ್ಯತ್ಕಾಲವೇ ಕಾರಣವು, ಇಂತಪ್ಪ ಕಾರಣದಲ್ಲಿ ತಮಸ್ಸೂ, ವರ್ತಮಾನದಲ್ಲಿ ಸತ್ಯವೂ, ಭೂತದಲ್ಲಿ ರಜಸ್ಸೂ, ಅಂತಪ್ಪ ತಮೋರೂಪಮಾದ ಭವಿಷ್ಯತ್ತಿನಲ್ಲಿ ಜೀವನೂ ಇದಿರೇರುತ್ತಿರಲು, ರಜೋರೂಪಮಾದ ಭೂತದಲ್ಲಿ ಮನಸ್ಸು ಇಳಿದುಹೋಗಿ, ಭೂತದಲ್ಲಿರ್ಪ ಕಾಮನವಶಮಾಯಿತ್ತು. ಜೀವನಿದಿರೇರಿ ಭವಿಷ್ಯದಲ್ಲಿರ್ಪ ಕಾಲವಶಮಾದಲ್ಲಿ, ಸತ್ವವಳಿದು ಶರೀರ ಲಯಮಾಯಿತ್ತು. ಉತ್ತರ ದಕ್ಷಿಣಮುಖವಾಗಿ ಯಾತನೆಬಡುತ್ತಿರ್ಪ ಮನೋಜೀವಗಳು ಕರ್ಮಾನುಬಂಧದಿಂ ಪೂರ್ವಭೋಗವನನುಸರಿಸಿ ಕೂಡಿ, ತತ್ಸಂಗಮತ್ವದಿಂ ದ್ರವಿಸುತ್ತಿರ್ಪ ಬಿಂದುವಂ ಹೊಂದಿ, ಪಶ್ಚಿಮದಲ್ಲಿ ಶರೀರಿಯಾಗಿ ವ್ಯವಹರಿಸುತ್ತಿರ್ಪುದೇ ಭವವು, ಇಂತಪ್ಪ ವರ್ತಮಾನಕಾಲವನ್ನು ಇಂದ್ರಿಯಂಗಳಿಂದ ತಿಳಿದು. ಭೂತಕಾಲವನ್ನು ಮನಸ್ಸಿನಿಂದ ತಿಳಿದು, ಭವಿಷ್ಯತ್ಕಾಲವನ್ನು ಭಾವದಿಂದ ತಿಳಿದು, ಪುರುಷನು ಭೂತಪದಾರ್ಥವಂ ನಾಶಮಾಡದೆ, ಭವಿಷ್ಯತ್ಪದಾರ್ಥದೊಳಗೆ ಹೊಂದಿ, ತಾನನುಭವಿಸುತ್ತಿರ್ಪಲ್ಲಿ, ಆ ಭವಿಷ್ಯತ್ತೇ ವರ್ತಮಾನಮಾಗಿ, ಆ ವರ್ತಮಾನವೇ ಭವಿಷ್ಯದೊಳಗೆ ಬೆರದು ಭೇದದೋರದಿರ್ಪಲ್ಲಿ, ಭೂತಜ್ಞಾನವಳಿದು ಮನಸ್ಸು ನಾಶಮಾಯಿತ್ತು. ವರ್ತಮಾನಜ್ಞಾನವಳಿದಲ್ಲಿ ಶರೀರೋಪಾಧಿಯು ನಷ್ಟಮಾಯಿತ್ತು. ಭವಿಷ್ಯತ್ ಜ್ಞಾನವು ನಷ್ಟಮಾದಲ್ಲಿ ಜೀವನು ಭ್ರಾಂತಿಯಂ ಬಿಟ್ಟು, ತಾನೇ ಅಖಂಡಪರಿಪೂರ್ಣವಸ್ತುವಾಗಿರ್ಪುದೆ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೇ.