Index   ವಚನ - 34    Search  
 
ಆಕಾಶವೇ ಸೂಕ್ಷ್ಮವು, ಪೃಥ್ವಿಯೇ ಸ್ಥೂಲವು, ಪೃಥ್ವಿಯಲ್ಲಿ ಮನುಷ್ಯರಿಹರು, ಆಕಾಶದಲ್ಲಿ ದೇವತೆಗಳಿಹರು. ಮನುಷ್ಯರಿಗೆ ತಮೋ ರೂಪಮಾದ ರಾತ್ರಿಯೇ ದೇವತೆಗಳಿಗೆ ಸತ್ವರೂಪಮಪ್ಪ ದಿವವೇ ಅಹಸ್ಸಾಗಿ, ಅದರಲ್ಲಿ ಸಂಚರಿಸುತ್ತಿಹರು. ದಿವದಲ್ಲಿ ಪೃಥ್ವಿಯು ಪ್ರತ್ಯಕ್ಷಮಾಗಿಹುದು, ರಾತ್ರಿಯಲ್ಲಿ ಆಕಾಶವು ಪ್ರತ್ಯಕ್ಷಮಾಗಿಹುದು. ಮನುಷ್ಯರಿಗೆ ದೇವಲೋಕವು ಉದ್ದವಾಗಿ, ದೇವತೆಗಳಿಗೆ ಮನುಷ್ಯಲೋಕವು ಉದ್ದವಾಗಿರ್ಪುದರಿಂದ ಮನುಷ್ಯರಿಗೆ ಸೂರ್ಯಮಂಡಲವು ಉನ್ನತಮಾಗಿ, ಆ ಸೂರ್ಯನಿಂದ ಬಂದ ಜ್ಞಾನವೇ ಭೂಮಿಯಲ್ಲಿ ಕರ್ಮವಶಮಾಗಿ, ಮನುಷ್ಯರಿಗೆ ಬಿಂದುರೂಪದಲ್ಲಿ ಫಲಿಸಿ, ಅದೇ ಜೀವನಮಾಯಿತ್ತು. ದೇವತೆಗಳಿಗೆ ಚಂದ್ರಮಂಡಲವು ಉನ್ನತಮಾಗಿ, ಆ ಚಂದ್ರಕಿರಣದಿಂದ ಬಂದ ಅಮೃತವು ಆಕಾಶದಲ್ಲಿ ವ್ಯಾಪಿಸಿ, ಜ್ಞಾನಮುಖದಲ್ಲಿ ಸದ್ಯಃಫಲವಾಗಿರ್ಪ ಕಳೆಯೇ ದೇವತೆಗಳಿಗೆ ಜೀವನಮಾಯಿತ್ತು. ದೇವತೆಗಳಿಗೆ ಶಾಸ್ತ್ರವೇ ಸಿದ್ಧಾಂತಮಾಯಿತ್ತು, ಮನುಷ್ಯರಿಗೆ ಜ್ಯೋತಿಷ್ಯವೇ ಸಿದ್ಧಾಂತಮಾಯಿತ್ತು. ದೇವತೆಗಳಿಗೆ ಕಾಲದಲ್ಲಿ ಕರ್ಮವು ಸವೆದುದೇ ಮರಣವು. ಮನುಷ್ಯರು ಮರಣಾಂತದಲ್ಲಿ ಬ್ರಹ್ಮಾಂಡದಲ್ಲಿರ್ಪ ನರಕವನನುಭವಿಸಿ, ಪಾತಾಳಲೋಕದಲ್ಲಿ ಕಳಾಮುಖದಲ್ಲಿ ಹೋಗಿ ದೇವಲೋಕದಲ್ಲಿ ಜನಿಸುತ್ತಿಹರು. ದೇವತೆಗಳು ಮರಣಾಂತದಲ್ಲಿ ಪಿಂಡಾಂಡ ನರಕವನನುಭವಿಸಿ, ಸೂಕ್ಷ್ಮ ತ್ರಿಕೋಣಸ್ವರೂಪಮಪ್ಪ ಪಾತಾಳದಲ್ಲಿ ಬಿಂದುಮುಖದಲ್ಲಿ ಜನಿಸುತ್ತಿಹರು. ದೇವತೆಗಳೇ ಸತ್ವಸ್ವರೂಪರು, ಮನುಷ್ಯರು ತಮಸ್ವರೂಪರು, ಮನುಷ್ಯರೂಪಾದ ತಮಸ್ಸನ್ನು ದೇವತೆಗಳು ಆಚರಿಸುತ್ತಿಹರು, ದೇವತಾರೂಪಮಾದ ಸತ್ವವನ್ನು ಮನುಷ್ಯರು ಆಚರಿಸುತ್ತಿರಲು, ಈ ಮನುಷ್ಯರು ಆಚರಿಸುವ ಸತ್ವವೇ ಸತ್ವರೂಪವಾದ ದೇವಲೋಕವಂ ಹೊಂದಿಸುತ್ತದೆ. ದೇವತೆಗಳು ಆಚರಿಸುವ ತಮಸ್ಸೇ ತಮೋರೂಪವಾದ ಮತ್ರ್ಯಲೋಕವಂ ಹೊಂದಿಸುತ್ತಿರ್ಪ ಯಾತಾಯಾತವೇ ಭವವೆನಿಸಿಕೊಂಡಿತ್ತು. ಇಂತಪ್ಪ ವಿವೇಕವನ್ನು ಗುರುಮುಖದಿಂದ ತಿಳಿದ ಮಹಾಪುರುಷನು ಸ್ಥೂಲವನ್ನು ಕರ್ಮದಿಂದ ಪರಿಶುದ್ಧಿಮಾಡಿ, ಸೂಕ್ಷ್ಮವನ್ನು ಜ್ಞಾನದಿಂ ಪರಿಶುದ್ಧವಂ ಮಾಡಿ, ಎರಡಕ್ಕೂ ಮಧ್ಯದಲ್ಲಿ ತನ್ನ ನಿಜಸ್ವರೂಪಮಾಗಿರ್ಪ ಶಬ್ದಪ್ರಕಾಶಮಪ್ಪ ಆ ಭಾವದಲ್ಲಿ ಬೆರದು, ಆ ಭಾವದಿಂದಲೇ ಈ ಸ್ಥೂಲ ಸೂಕ್ಷ್ಮಂಗಳಂ ಭೇದಿಸಿ, ಆ ಭೇದಿಸುವುದಕ್ಕೆ ಇದೇ ಕಾರಣಮಾಗಿ, ಆ ಭಾವವು ಬಲಿದುಬರಲು, ಸ್ಥೂಲಸೂಕ್ಷ್ಮಂಗಳಳಿದು ಭಾವದೊಳಗೆ ಲೀನಮಾಗಲು, ಸ್ವರ್ಗನರಕಂಗಳಳಿದು ಭಾವಸ್ವರೂಪಮಾಗಿರ್ಪುದೇ ನಿಜವು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.