Index   ವಚನ - 37    Search  
 
ಒಳಗೆ ಪಾಪವೂ ಹೊರಗೆ ಧರ್ಮವೂ ಮನುಷ್ಯರಿಗೆ, ಹೊರಗೆ ಪಾಪವೂ ಒಳಗೆ ಧರ್ಮವು ದೇವತೆಗಳಿಗೆ. ದೇವತೆಗಳು ಬಾಹ್ಯತಮರಾದುದರಿಂದ ಆ ತಮಸ್ಸೇ ಅಶುಚಿಯಾಗಲಾಗಿ, ಅಶುಚಿಯಲ್ಲಿ ಕಾರಣರೂಪನಾದ ಪರಮಾತ್ಮನು. ಸತ್ಕರ್ಮದಲ್ಲಿ ಭಜಿಸುವುದಕ್ಕೆ ಯೋಗ್ಯವಲ್ಲವಾಯಿತ್ತು. ಈ ಮನುಷ್ಯರು ಅಂತಸ್ತಮರೂ ಬಹಿಶ್ಶುಚಿಗಳೂ ಆಗಲಾಗಿ, ಆ ಕಾರಣರೂಪನಾದ ಶಿವನಲ್ಲಿ ಬಾಹ್ಯಕ್ರಿಯೆಗೆ ಯೋಗ್ಯವಲ್ಲದೆ ಅಂತಃಕ್ರಿಯೆಗೆ ಯೋಗ್ಯವಲ್ಲವಾಯಿತ್ತು. ಅದರಂದ ಬಾಹ್ಯರಸಮುಳ್ಳ ಕಾಷ್ಠವೇ ದೇವತೆಗಳು, ಅಂತರ್ರಸಮುಳ್ಳ ಕಾಷ್ಠವೇ ಮನುಜರು. ಇಂತಪ್ಪ ಕಾಷ್ಠಭಾವದಲ್ಲಿ ಸುಷುಪ್ತಿಯಂ ಹೊಂದಿರ್ಪ ಜ್ಞಾನಾಗ್ನಿಯೇ ಕಾರಣಶರೀರವು; ಅದು ಪರಮಪವಿತ್ರಮಾಗಿಹುದು. ಅಂತಪ್ಪ ಕಾರಣಕಲಾಶರೀರಮಾಗಿರ್ಪ ಶಿವನು ಮಹಾಗುರುಪ್ರಯೋಗಾಂತರದಿಂ ಶರೀರವೆಂಬ ಕಾಷ್ಠದಲ್ಲಿ ಹೊತ್ತಿಸಲು, ಆ ಕಾಷ್ಠವನೆಡೆವಿಡದೆ ಪ್ರಕಾಶಮಾಗಿದ್ದಲ್ಲಿ, ಆ ಕಾಷ್ಠದೊಳಗಿರ್ಪ ರಸವಾರಿ, ದಿವ್ಯತೇಜಸ್ಸು ಕಾಷ್ಠದೊಳಗೆ ಪ್ರಕಾಶಮಾಗಿ, ಆ ಅಗ್ನಿಯೇ ಕಾಷ್ಠದೊಳಹೊರಗೆ ತಾನೆಯಾಗಿರ್ದಲ್ಲಿ, ಹೊರಗಿರ್ದ ಅಗ್ನಿಯನ್ನು ಪರಿಸಮಾಪ್ತಿಯಂ ಮಾಡಿ, ತದಗ್ನಿಯನ್ನು ಭಾವದಲ್ಲಿ ವೇದಿಸಹೋದರೆ, ಅಗ್ನಿಯು ವೇದಿಸಿತಲ್ಲದೆ ಕಾಷ್ಠವು ವೇದಿಸಿತೇನಯ್ಯಾ? ಅಗ್ನಿಯಾರಿದ ಕಾಷ್ಠವೇ ಅಪವಿತ್ರವು. ಆದುದರಿಂದ ಕಾಷ್ಠಕ್ಕೆ ಹೊತ್ತಿಸಿದ ಅಗ್ನಿಯನ್ನು ಆ ಕಾಷ್ಠದೊಳಗಿರ್ಪ ರಸವಾರದನ್ನಕ್ಕ ಭಿನ್ನಿಸಲಾಗದು. ಸತ್ಕ್ರಿಯಾಮುಖದಿಂ ಭಿನ್ನಿಸದಿರ್ದಲ್ಲಿ, ಆ ಕಾಷ್ಠದೊಳಗಿರ್ಪ ರಸವಾರುವುದೇನಯ್ಯಾ? ಆ ರಸವಾರಿದಲ್ಲಿ ಬಯಲಪ್ಪುದೇನಚ್ಚರಿಯಯ್ಯಾ. ಅದಲ್ಲದೆ ಕಾಷ್ಠದೊಳಗಣ ಅಗ್ನಿಯು ಕಾಷ್ಠವಂ ಹತ್ತಿದಲ್ಲಿ, ಕಾಷ್ಠವಂ ಸೇರಿದ ಕಾಷ್ಠವೆಲ್ಲಾ ಬಯಲಪ್ಪುದಲ್ಲದೆ ಶಿಲೆಬಯಲಪ್ಪುದೇನಯ್ಯಾ? ಶಿಲೆಯೊಳಗಿರ್ಪ ಅಗ್ನಿಯು ಕಾಷ್ಠವಂ ಹತ್ತಿದಲ್ಲಿ, ಕಾಷ್ಠವು ಬಯಲಪ್ಪುದಲ್ಲದೆ ಶಿಲೆಬಯಲಪ್ಪುದೇನಯ್ಯಾ? ಶಿಲೆಯೊಳಗಿರ್ಪ ಅಗ್ನಿಯು ಕಾಷ್ಠವಂ ಹತ್ತಿದಲ್ಲಿ, ಕಾಷ್ಠವು ಬಯಲಪ್ಪುದಲ್ಲದೆ ಶಿಲೆಬಯಲಪ್ಪುದೇನಯ್ಯಾ? ಅಂತಪ್ಪ ಗುರುವಜ್ಞಾನಿಯಾಗಿ ಶಿಷ್ಯನು ಜ್ಞಾನಿಯಾದುದೇ ಶಿಲಾಕಾಷ್ಠನ್ಯಾಯವು. ಗುರುವು ಜ್ಞಾನಿಯಾಗಿ ಶಿಷ್ಯನು ಅಜ್ಞಾನಿಯಾದುದೇ ಕಾಷ್ಠಶಿಲಾನ್ಯಾಯವು. ಈರ್ವರೂ ಅಜ್ಞಾನಿಗಳಾದುದೇ ಶಿಲಾ ಶಿಲಾನ್ಯಾಯವು. ಇಬ್ಬರೂ ಜ್ಞಾನಿಗಳಾದುದೇ ಕಾಷ್ಠ ಕಾಷ್ಠನ್ಯಾಯವಾಯಿತ್ತು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.