Index   ವಚನ - 40    Search  
 
ಎಲ್ಲಾ ಮಹಿಮೆಯೂ ತನ್ನಲ್ಲುಳ್ಳ ಮಹಾಸತ್ತೇ ನಿಜವು. ಅದು ಸಾಕಾರಕ್ಕೆ ಬಪ್ಪಲ್ಲಿ, ಆ ನಿಜವೇ ಜ್ಞಾನರೂಪಮಾದಲ್ಲಿ ಆ ಮಹಿಮೆಯೇ ಸತ್ವರೂಪಮಾಯಿತ್ತು. ಆ ಜ್ಞಾನರೂಪನಾದ ಶಿವನು ಸತ್ವಸ್ವರೂಪಮಾದ ಮಹಾಶಕ್ತಿಯೊಳಗೆ ಕೂಡಿದಲ್ಲಿ, ಅಹಂಕಾರವೆಂಬ ರಜೋಮೂರ್ತಿಯುತ್ಪನ್ನಮಾಯಿತ್ತು. ಅಹಂಕಾರದಲ್ಲಿ ಕಾಮಾದ್ಯರಿಷಡ್ವರ್ಗಂಗಳುದಿಸಿ ಬಹುವಿಧಕರ್ಮಗಳಂ ಸೃಷ್ಟಿಸಲು, ಆ ಕರ್ಮಂಗಳಿಂ ಅಜ್ಞಾನ ಕೆಡುತ್ತಿರಲು, ಶಿಲಾಬದ್ಧ ಪುರುಷರತ್ನದೋಪಾದಿಯಲ್ಲಿ ಹೊದ್ದಿ ಹೊದ್ದದೆ ಭೇದಿಸಿ ತಿಳಿದಲ್ಲಿ ತನ್ನ ನಿಜಮಹಿಮೆಯೇ ಪ್ರಕಾಶಮಾಗಿ, ಸಕಲಕ್ಕೂ ತಾನೇ ಲಯಕರ್ತೃವಾಗಿ ಚ್ಯುತಿಯಿಲ್ಲದಿರ್ಪ ಮಹಾಜ್ಞಾನವೇ ಶಿವನು, ಆ ಸತ್ವವೇ ವಿಷ್ಣುವು, ಅಹಂಕಾರವೇ ಬ್ರಹ್ಮನು. ಸತ್ವರೂಪಿಯಾದ ವಿಷ್ಣುವು ಶರೀರ ಕರ್ತೃವೂ, ಜ್ಞಾನಸ್ವರೂಪನಾದ ಶಿವನು ಜೀವಕರ್ತೃವೂ, ಅಹಂಕಾರರೂಪನಾದ ಬ್ರಹ್ಮನು ಕರ್ಮಕರ್ತೃವೂ ಆಗಿಹನು. ಅಹಂಕಾರವು ನಷ್ಟಮಾದಲ್ಲಿ ಕರ್ಮಲಯವೂ ಸತ್ವವು ನಷ್ಟಮಾದಲ್ಲಿ ಶರೀರಲಯವೂ ಜ್ಞಾನವಧಿಕವಾದಲ್ಲಿ ಜೀವನಿಗೆ ಲಯವೂ ಆಗುವುದು. ಅಂತಪ್ಪ ಜೀವನ ಲಯವೇ ಮೋಕ್ಷವು, ಅಂತಪ್ಪ ಮೋಕ್ಷಸ್ಥಾನದಲ್ಲಿರ್ಪ ದಿವ್ಯಜ್ಞಾನವೇ ಮಹಾಗುರು ದಕ್ಷಿಣಾಮೂರ್ತಿಸ್ವರೂಪಮಾಗಿ, ಅಂತಪ್ಪ ಮೂರ್ತಿಯ ಹೃದಯಸ್ಥಾನದಲ್ಲಿ ಬೆಳೆದ ಚಿನ್ನಾದವೇ ಪ್ರಣವವು. ಅಂತಪ್ಪ ಪ್ರಣವವೇ ಮೂಲಮಾಗಿ, ಪಂಚಾಕ್ಷರಗಳೆಂಬ ಪಂಚಶಾಖೆಗಳಿಂದಲೂ ಪರ್ಣಫಲಂಗಳಿಂದಲೂ ಕೂಡಿದ ವೇದವೆಂಬ ಮಹಾವಟವೃಕ್ಷದ ಮೂಲಮಪ್ಪ ಪ್ರಣವದಲ್ಲಿ ಪ್ರಕಾಶಿಸುತ್ತಿರ್ಪ ಹೃತ್ಕೋಟರದಲ್ಲಿ ದಿವ್ಯ ವಾಸನೆವಿಡಿದ ಅಷ್ಟದಳಕರ್ಣಿಕಾ ಮಂಗಳಪೀಠದಲ್ಲಿ ಯೋಗಾಸನಾಸೀನನಾಗೊಪ್ಪುವ ಮಹಾಗುರುವು. ತನ್ನ ನಿಜಮಹಾತ್ಮ್ಯ ಪ್ರಕಟನನಿಮಿತ್ತಮಾಗಿ ಸಕಲ ಪ್ರಪಂಚಗಳಂ ಸೃಷ್ಟಿಸಿ, ತನ್ನ ಪಂಚಮಮುಖದಲ್ಲಿ ತಾನು ಈಶಾನ್ಯರೂಪನಾಗಿ, ಉಳಿದ ನಾಲ್ಕುಮುಖಂಗಳೇ ಚತುರಾಚಾರ್ಯಸ್ವರೂಪನಾಗಿ, ನಾಲ್ಕಾಶ್ರಮಂಗಳಲ್ಲಿ ನಾಲ್ಕುರೂಪದಲ್ಲಿ ಜೀವರ ದುಃಖಂಗಳನ್ನು ಕಳೆದು, ಉಪದೇಶಿಸುತ್ತಾ ಅದರಲ್ಲಿ ಪರಿಪಕ್ವವಾದ ಪದಾರ್ಥವನ್ನು ತಾನು ಪರಿಗ್ರಹಿಸುತ್ತಾ, ತದ್ವಟಮೂಲವಾಸಿಯಾಗಿರ್ಪ ಮಹಾಗುರುವೇ ಶಿವನು, ಆ ವಟಪರ್ಣವಾಸಿಯಾಗಿರ್ಪವನೇ ವಿಷ್ಣುವು, ಆ ವಟಫಲದಳಿತರಸವೆಂಬ ಜಲಪ್ರಳಯದಲ್ಲಿ ತೇಲುತ್ತಾ ಮುಳುಗುತ್ತಾ ಇರ್ಪವನೇ ಬ್ರಹ್ಮನು. ಮಹಾವಟವೃಕ್ಷಮೂಲದಲ್ಲಿ ಉಪದೇಶಕರ್ತೃವಾಗಿರ್ಪ ಮಹಾಗುರುವಿನ ವಾಕ್ಯವೇ ಮಂತ್ರವು. ಲೀಲಾಸಮಾಪ್ತಿಕಾಲದಲ್ಲಿ ಪ್ರಪಂಚಕಾಮಸಂಹಾರ ಭಸ್ಮವೇ ಭಸ್ಮವು. ಅಂತಪ್ಪ ಪ್ರಪಂಚವನ್ನು ತನ್ನ ಲಲಾಟದಲ್ಲಿರ್ಪ ದಿವ್ಯಜ್ಞಾನದೃಷ್ಟಿಯಿಂದ ನೋಡುತ್ತಿರಲು, ತನ್ನೇತ್ರಾನಂದಕಣಗಳೇ ರುದ್ರಾಕ್ಷಮಣಿರೂಪಮಾಗಿ, ಆ ಸದಾಶಿವನಿಗೆ ಆಭರಣಮಾಯಿತ್ತು. ಅಂತಪ್ಪ ಮಹಾಪ್ರಪಂಚವನ್ನು ಕೆಡಿಸುವ ನಟನೆಯಿಂದ ತಾನೇ ಜಂಗಮಮೂರ್ತಿಯಾಗಿ ಮಹಾನಾಟ್ಯವನ್ನೆಸಗುತ್ತಿರಲಾಗ, ದಕ್ಷಿಣಪಾದಾಂಗುಷ್ಠಾಗ್ರದಲ್ಲಿ ಶಿರದಲ್ಲಿರ್ಪ ಗಂಗೆ ತುಳುಕಿಬಿದ್ದು ಧಾರಾರೂಪಮಾಗಿ ಪ್ರವಹಿಸುತ್ತಿರಲದೇ ಪಾದೋದಕಮಾಯಿತ್ತು. ಅಂತಪ್ಪ ಪಾದೋದಕದಿಂದ ಪೂತಮಾಗಿ ಲಲಾಟಾಗ್ನಿಯಿಂದ ತಪ್ತಮಾಗಿ, ಪರಿಪಕ್ವಕ್ಕೆ ಬಂದು ದಿವ್ಯರುಚಿಯಿಂ ಕೂಡಿ, ನಿಜವಾಸನೆವಿಡಿದಿರ್ಪ ಈ ಪ್ರಪಂಚವೆಂಬ ಮಹಾಪ್ರಸಾದವನ್ನು ಕೃಪಾಕರದಲ್ಲಿ ಪರಿಗ್ರಹಿಸಿಕೊಂಬುದೇ ಮಹಾಪ್ರಸಾದವು. ಇಂತಪ್ಪ ಪ್ರಸಾದಭೋಗದಿಂ ತೃಪ್ತಿಬಡೆದು, ಆ ತೃಪ್ತಿಸ್ಥಾನದಲ್ಲಿ ಪರಮಾನಂದ ಮಹಾಲಿಂಗಸ್ವರೂಪಮಾಗಿ, ಎಲ್ಲಕ್ಕೂ ತಾನೇ ಮೂಲಮಾಗಿರ್ಪ ಆ ಲಿಂಗವನ್ನು ಧರಿಸಿದ ಶಿವಭಕ್ತನಿಗೆ ಅಷ್ಟಮೂರ್ತಿಸ್ವರೂಪನಾದ ಶಿವನೇ ಆವರಣರೂಪನಾಗಿರುವಕಾರಣ ಅವನೇ ಪರಮಪವಿತ್ರನು. ಆ ಭಕ್ತನಿಗೆ ಮಂತ್ರ, ಭಸ್ಮ, ರುದ್ರಾಕ್ಷ, ಪಾದೋದಕ, ಪ್ರಸಾದಗಳೈದೂ ಐದು ಮುಖಂಗಳು. ಗುರು, ಲಿಂಗ, ಜಂಗಮ ಈ ಮೂರೂ ಮೂರಂಗಗಳು ಇಂತಪ್ಪ ಭಕ್ತನು ಗುರುವಿನಲ್ಲಿ ಜಾಗ್ರವನ್ನೂ, ಜಂಗಮನಲ್ಲಿ ಸ್ವಪ್ನವನ್ನೂ, ಲಿಂಗದಲ್ಲಿ ಪರಮಾನಂದಸುಷುಪ್ತಿಯನ್ನೂ ಹೊಂದಿರ್ಪುದೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.