Index   ವಚನ - 49    Search  
 
ಬ್ರಹ್ಮಾಂಡವೇ ಸ್ಥಾವರವು, ಪಿಂಡಾಂಡವೇ ಜಂಗಮವು, ಸದ್ರೂಪಮಾದ ಬ್ರಹ್ಮಾಂಡಡದೊಳಗಿರ್ಪ ಪಂಚಾಶತ್ಕೋಟಿ ವಿಸ್ತಿರ್ಣಮಾಗಿರ್ಪ ಪೃಥ್ವಿಯಲ್ಲಿ ಲವಣಸಮುದ್ರಮಧ್ಯದಲ್ಲಿರ್ಪ ಕರ್ಮಭೂಮಿಯನ್ನು ಮನುಷ್ಯರು ಶುದ್ಧಿಯನ್ನು ಮಾಡಿ, ಬಿಂದುಬೀಜವನ್ನು ವಸಂತಕಾಲದಲ್ಲಿ ಭಿತ್ತಿ, ವರ್ಷಾಕಾಲದಲ್ಲಿ ಬೆಳೆದು, ಹೇಮಂತಕಾಲದಲ್ಲಿ ಕೂಡಿಟ್ಟು, ತದ್ರಾಜ್ಯಾಧಿಪತಿಯ ಭಾಗವನ್ನಾತಾಂಗೆ ಕೊಟ್ಟು, ಉಳಿದುದನ್ನು ಪುತ್ರ ಮಿತ್ರ ಕಳತ್ರರೊಡನೆ ತಾನನುಭವಿಸುತ್ತಿರ್ಪುದಂದದಿ, ಚಿದ್ರೂಪವಾದ ಅನಂತಕೋಟಿ ಪಿಂಡಾಂಡಗಳಲ್ಲಿ ಕರ್ಮಕರ್ತೃವಾದ ಮನುಷ್ಯನ ಶರೀರದ ಹೃದಯಮೆಂಬಾಕಾಶಮಧ್ಯದಲ್ಲಿರ್ಪ ಕಲ್ಮಷಂಗಳಂ ಕಳೆದು ಶೋಧಿಸಿ, ನಾದಬೀಜಮಂ ಜ್ಞಾನಾಗ್ನಿಯ ಹದದಲ್ಲಿ ಬಾಲ್ಯದಲ್ಲಿ ಬಿತ್ತಿ, ಯೌವನದಲ್ಲಿ ಬೆಳೆಸಿ, ವಾರ್ಧಕ್ಯದಲ್ಲಿ ಕೂಡಲಿಟ್ಟು, ತತ್ಪದಾರ್ಥವನ್ನು ತನ್ಮನೋನಾಥನಪ್ಪ ಶಿವನಿಗೆ ಕೊಟ್ಟು, ಉಳಿದ ತನ್ಮಂತ್ರಪದಾರ್ಥವನ್ನು ಮಂತ್ರಸ್ವರೂಪಿಗಳಪ್ಪಾ ದೇವತೆಗಳು ತಾವನುಭವಿಸುತ್ತಿರ್ಪರು, ಈ ಪಿಂಡಾಂಡ ಬ್ರಹ್ಮಾಂಡಗಳಿಗೆ ಜಿಹ್ವೆಯೇ ಆನಂದಕಾರಣಕಳಾರೂಪಮಾಗಿ ಬ್ರಹ್ಮಾಂಡಲ್ಲಿರ್ಪ ಬಿಂದುವಸ್ತುವಿನಿಂದ ಪಿಂಡಾಂಡಮಂ ರಕ್ಷಿಸಿ, ಪಿಂಡಾಂಡದಲ್ಲಿ ಹುಟ್ಟಿದ ನಾನಾ ವಸ್ತುವಿನಿಂದ ಬ್ರಹ್ಮಾಂಡಮಂ ರಕ್ಷಿಸಿ, ಮನುಷ್ಯರನ್ನು ದೇವತೆಗಳನ್ನಾಗಿಮಾಡಿ, ದೇವತೆಗಳಂ ಮನುಷ್ಯರಂ ಮಾಡಿ, ಯಾತಾಯಾತನೆಗಳಲ್ಲಿ ಪಿಂಡಾಂಡನರಕವನ್ನು ದೇವತೆಗಳನುಭವಿಸಲು, ಬ್ರಹ್ಮಾಂಡನರಕವನ್ನು ಮನುಷ್ಯರನುಭವಿಸಿ ದುಃಖಿಸುತ್ತಾ, ತತ್ಸುಖಾನುಭವಗಳಲ್ಲಿ ನಲಿವುತ್ತಿರ್ಪುದೆಲ್ಲಾ ಭ್ರಾಮಕವೆಂದು ತಿಳಿದ ಮಹಾಪುರುಷನಿಗೆ ಬ್ರಹ್ಮಾಂಡವೂ ಪಿಂಡಾಂಡವೂ ಏಕಮಾಯಿತ್ತು. ದೇವಮನುಷ್ಯರ ಶರೀರದಲ್ಲಿರ್ಪ ಶಿವಶರಣರ ಪಾದಸೇವೆಯಲ್ಲಿ ನಾನು ಪರಿಶುದ್ಧನಾಗಿ ಪರಿಣಾಮಿಸುವಂತೆ ಮಾಡಾ ಮಹಾಘನ ದೊಡ್ಡದೇಶಿಕಾರ್ಯಗುರು ಪ್ರಭುವೆ.