Index   ವಚನ - 51    Search  
 
"ತಿಷ್ಠತೀತಿ ಸ್ಥಾಣುಃ" ಎಂಬ ಅರ್ಥದಿಂದ ಸತ್ತೆಂಬ ನಿಜತತ್ವವೇ ಸ್ಥಾಣುರೂಪಮಾದ ಶಿವನು. ಅಂತಪ್ಪ ಪರಶಿವನ ಸ್ವಭಾವದಲ್ಲಿ ನಿಜಕ್ರೀಡಾಪ್ರಕೃತಿಯು ಉತ್ಪನ್ನಮಾಗಿ, ಪರಮಶಿವತತ್ವಮಂ ತನ್ನ ಶಕ್ತಿಗೆ ತಕ್ಕಂತೆ ಗ್ರಹಿಸಲು, ಆ ಪ್ರಕೃತಿಘಟಬಂಧದಿಂ ಭಿನ್ನವಾಗಿ ತೋರುತ್ತಿರ್ಪ ತತ್ತತ್ವವೇ ಚಿದ್ರೂಪಮಪ್ಪ ಜೀವಕೋಟಿಗಳಾಯಿತ್ತು. ಅದೆಂತೆಂದೊಂಡೆ: ಮನದಲ್ಲಿ ಹುಟ್ಟಿದ ಕಾಮವು ಆ ಮನವನ್ನೇ ಗ್ರಹಿಸಿ, ಕರ್ಮಕ್ಕೆ ತಂದು, ಮುಖದಲ್ಲಿ ಆ ಮನೋರೂಪಮಪ್ಪ ತದ್ಗುಣಂಗಳೇ ಅನೇಕವಾಗುದಿಸಿ, ಆ ಕಾಲದಲ್ಲಿ ಸೃಷ್ಟಿಸ್ಥಿತಿಸಂಹಾರಸುಖದುಃಖಂಗಳಿಗೊಳಗಾಗಿ ಆ ನಾಮವಳಿಯಲು, ಉಳಿದ ಮನವೊಂದೇ ಆಗಿರ್ಪಂತೆ, ಲೀಲಾಶಕ್ತಿವಶದಿಂ ಪರಶಿವತತ್ವದಲ್ಲಿ ತತ್ವರೂಪಮಪ್ಪ ಅನಂತಕೋಟಿ ಜೀವಂಗಳು ಬಹುವಿಧಮಾಗಿ ತೋರಿದಲ್ಲಿ ಜಡಮಯನಾಗಿ, ಅವಿದ್ಯಾರೂಪಮಪ್ಪ ಶರೀರವಸ್ತ್ರಂಗಳು ಸೃಷ್ಟಿಸುತ್ತಿರಲೀ ಜೀವಂಗಳು ವಸ್ತ್ರಧಾರಣಕಾರಣ ಪರಶಿವನಿಂದಾ ಕೊಂಡು ಜ್ಞಾನಜೀವಿತಾರ್ಥವನ್ನು ಆ ಕಾಮನಿಗೆ ಕೊಟ್ಟು, ಅವನಿಂದಾ ಶರೀರವಸ್ತ್ರಮಂ ತರಿಸಿಕೊಂಡು, ಧರಿಸುತ್ತಾ ತನ್ನನುಭದಿಂದಲೇ ಬಾಲ್ಯ ಯೌವನ ಕೌಮಾರ ವಾರ್ಧಕ್ಯಗಳೆಂಬವಸ್ಥೆಗಳಿಂದ ಮಲಿನವಾಗಿ, ಕಾಲನೆಂಬ ರಜಕನ ಕರಫೂತದಿಂ ಜೀರ್ಣವಾಗಿಪೋದ ವಸ್ತ್ರಮಂ ಕಂಡು ದುಃಖಪಟ್ಟು, ತಿರಿಗಿ ಸಂಧಿಸುವ ಕೋಟಲೆಯೇ ಭವವು. ಇಂತಪ್ಪ ಭವಕ್ಕೊಳಪಟ್ಟ ಎಲ್ಲಾ ಜೀವರು ಸ್ಥೂಲಸೂಕ್ಷ್ಮಕಾರಣ ಶರೀರಗಳೆಂಬ ವಸ್ತ್ರಗಳಂ ಧರಿಸಿಹರು. ನೀನು ಶರೀರವೆಂಬ ವಸ್ತ್ರವ ಧರಿಸಿಬಿಡುವ ಕೋಟಲೆಯನೊಲ್ಲದೆ ದಿಗಂಬರನಾಗಿರ್ಪೆ. ಅಬ್ಧಿಗಂಭೀರತ್ವವೇ ನಿರ್ವಾಣ, ನಿರ್ವಾಣವೇ ಮುಕ್ತಿ. ಅಂತಪ್ಪ ನಿರ್ವಾಣಸುಖದೊಳಗೆ ನನ್ನಂ ಕೂಡಿಸಿ, ಜನ್ಮವಸ್ತ್ರಧಾರಣಜಾಡ್ಯಮಂ ಬಿಡಿಸಿ ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.