Index   ವಚನ - 57    Search  
 
ಕೇವಲ ಸದ್ರೂಪಮಾದ ನಿಷ್ಕಳಶಿವತತ್ವವು ತನ್ನೊಳ್ತಾನೇ ಪ್ರಕಾಶಿಸುತ್ತಿರ್ಪುದರಿಂ ಪರಮಾತ್ಮನೆಂಬ ಸಂಜ್ಞೆಯಿಂ ತನ್ನ ನಿಜಮಹಾತ್ಮ್ಯ ಪ್ರಕಟನೆಗೋಸುಗ ತಾನೇ ಆತ್ಮನಾಗಿ, ಆತ್ಮನೇ ಆಕಾಶವಾಗಿ, ಆಕಾಶವೇ ವಾಯುವಾಗಿ, ವಾಯುವೇ ಅಗ್ನಿಯಾಗಿ, ಅಗ್ನಿಯೇ ಜಲಮಾಗಿ, ಆ ಜಲವೇ ಪೃಥ್ವೀರೂಪವಾಗಿ ಘಟ್ಟಿಕೊಂಡು ಆ ಪೃಥ್ವಿಗೆ ಜಲವೇ ಕಾರಣಮಾಗಿ, ಆ ಜಲಕಗ್ನಿಯೇ ಕಾರಣಮಾಗಿ, ಆ ಅಗ್ನಿಗೆ ವಾಯುವೇ ಕಾರಣಮಾಗಿ, ಆ ವಾಯುವಿಗೆ ಆಕಾಶವೇ ಕಾರಣಮಾಗಿ, ಆ ಆಕಾಶಕ್ಕಾತ್ಮನೇ ಕಾರಣಮಾಗಿ, ಆ ಆತ್ಮನಿಗೆ ಪರಮಾತ್ಮನೇ ಕಾರಣಮಾಗಿ, ಒಂದಕ್ಕೊಂದು ತಮ್ಮಲ್ಲಿಯೇ ತಾವು ಸೃಷ್ಟಿ ಸ್ಥಿತಿ ಸಂಹಾರಂಗಳಿಗೆ ಕಾರಣಮಾಗಿರ್ಪ, ಆತ್ಮಾದಿ ಷಡ್ಭೂತಂಗಳಿಗೆ ತಾನೇ ಚೈತನ್ಯ ಸ್ವರೂಪಮಾಗಿರ್ಪ ಪರಮನು ಆತ್ಮಸಂಗದಿಂ ಜೀವಕೋಟಿಗಳಂ ಸೃಷ್ಟಿಸಿ, ಕರ್ಮಕ್ಕೆ ಕಾರಣಮಂ ಮಾಡಿ ಕ್ರೀಡಿಸುತ್ತಿರ್ದನದೆಂತೆಂದೊಡೆ: ಆಲವು ತಾನೇ ಪೃಥ್ವೀಸ್ವರೂಪಮಾಗಿ ಬಲಿದು, ಆ ಪೃಥ್ವಿಯನ್ನೇ ತನಗಾಧಾರವಂ ಮಾಡಿಕೊಂಡು, ತಾನೇ ಪೃಥ್ವಿಗೆ ಆಧಾರಮಾಗಿ, ಪೃಥ್ವಿಯಂ ಪರಿವೇಷ್ಠಿಸಿರ್ಪ ಜಲವೇ ಪತಿಯಾಗಿ, ಪೃಥ್ವಿಯಲ್ಲಿ ಪರಿವ ಜಲವೇ ಸತಿಯಾಗಿರ್ಪ ಆ ಜಲಬಂಧದಿಂ ಕುಡ್ಯ ಸೌಧ ಗೃಹಾದಿ ನಾನಾಸ್ವರೂಪಂಗಳಾಗಿ ನಿಂತು, ತನ್ನಲ್ಲಿರ್ಪ ಜಲವಾರಿಹೋಗಲು, ಆ ಸೃಷ್ಟಿಶಕ್ತಿಯಿಂ ತಾಂ ಘಟ್ಟಿಕೊಂಡು, ಜೀವರಿಗೆ ಜಲಹಿಂಸೆಯಂ ನಿವಾರಣಮಾಡುತ್ತಾ, ಆ ಜಲದಿಂದಲ್ಲೇ ತಾನು ಲಯವನೈದುತ್ತಿರ್ದಂದದಿ, ಆ ಪರಮಾತ್ಮನೇ ಆತ್ಮನಂ ಸುತ್ತಿ, ಆತ್ಮನಲ್ಲೇ ಸುಳಿದು, ತಾನೇ ಶಿವಶಕ್ತಿಸ್ವರೂಪಮಾಗಿ, ತನ್ನಿಂದ ಬುದ್ಧಮಾಗಿರ್ಪ ಆತ್ಮಪದಾರ್ಥದಲ್ಲಿ ಜೀವಜಾಲಂಗಳಂ ಸೃಷ್ಟಿಸಿ, ಪೃಥ್ವಿಯಲ್ಲಿ ಬೆಳೆದ ಬೆಳೆಯನ್ನು ಗೃಹದಲ್ಲಿ ತುಂಬಿ, ಶರೀರದಿಂದ ಅನುಭವಿಸುವಂದದಿ ಆತ್ಮನಿಂದ ಬೆಳೆದ ಕರ್ಮದ ಬೆಳಸನ್ನು ಜೀವಂಗಳಲ್ಲಿ ತುಂಬಿ, ತದನುಭವಕ್ಕೆ ತಾನೇ ಕಾರಣಮಾಗಿ, ನಿಜಮಾಹಾತ್ಮ್ಯ ಪ್ರಕಟನಮಂ ಮಾಡಿಯಾಡುತಿರ್ಪಭವನೆ ನಿನ್ನ ಸಂಬಂಧಮಾಗಿರ್ಪುದಂ ಭಾವದಲ್ಲಿ ತಿಳಿದುನೋಡಿದಲ್ಲಿ, ಎಲ್ಲವೂ ನೀನಾಗಿರ್ಪೆಯಲ್ಲದೆ, ಪೆರತೊಂದುಂಟೇನಯ್ಯಾ? ನಿನ್ನ ಕ್ರೀಡಾನಿಮಿತ್ತ ನಾನೆಂಬ ಬರಿಯಭ್ರಮೆಯಂ ಸೃಷ್ಟಿಸಿ, ಕಷ್ಟಬಡಿಪುದೊಳ್ಳಿತ್ತೇನಯ್ಯಾ? ಅರಿತವನ ಮುಂದೆ ಇಂದ್ರಜಾಲವಂ ಮಾಡಲು ಪರಿಶೋಭಿಸಬಲ್ಲುದೆ? ನಿನ್ನ ಮಾಯೆಯೆನಗೆ ಮನೋರಥಮಾಗಬಲ್ಲುದೆ? ಬೇರ ಬಲ್ಲವಂಗೆ ಎಲೆಯಂ ತೋರಹೋದರೆ, ಅಪಹಾಸ್ಯಕಾರಣಮಾಗಿಹುದು. ಇದನರಿತು ನನ್ನಂ ಕಾಡದಿರು ಕಂಡ್ಯಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.