ಭಂಡಾರದೊಳಗಿರ್ಪ ಸುವರ್ಣವೇ ಪ್ರಾಣಲಿಂಗವಾಗಿ,
ಆಭರಣರೂಪಮಾದ ಸುವರ್ಣವೇ ಇಷ್ಟಲಿಂಗರೂಪಮಾಗಿ
ಸಕಲಪ್ರಪಂಚದಲ್ಲೆಲ್ಲಾ ತಾನೇ ತುಂಬಿ,
ತನ್ನ ಮಹಿಮೆಯಿಂದಲ್ಲೇ ಸಕಲಪ್ರಪಂಚವನಾಡಿಸುವ
ಸುವರ್ಣವೇ ಭಾವಲಿಂಗಮಾಗಿ,
ಪ್ರಪಂಚದಲ್ಲೆಲ್ಲಾ ತುಂಬಿರ್ಪಲ್ಲಿ ಮಹಾಲಿಂಗಮಾಗಿ,
ಅದೇ ಆದಾಯಮುಖದಲ್ಲಿ ಒಮ್ಮುಖಕ್ಕೆ ಬಂದು
ತನಗಿದಿರಿಟ್ಟಲ್ಲಿ ಪ್ರಸಾದಲಿಂಗಮಾಗಿ,
ತನ್ನ ಸಂಸಾರಮುಖದಲ್ಲಿ ಸಂಚರಿಸುತ್ತಾ
ತನಗೆ ಸೇವನಾಯೋಗ್ಯಮಾದಲ್ಲಿ ಜಂಗಮಲಿಂಗಮಾಗಿ,
ಮುಂದೆ ತನ್ನ ಸಂರಕ್ಷಣಕಾರಣ
ಕೋಶಭರಿತಮಾದಲ್ಲಿ ಶಿವಲಿಂಗಮಾಗಿ,
ಅದೇ ಅಲಂಕಾರಮುಖದಲ್ಲಿ ದೊಡ್ಡಿತಾದಲ್ಲಿ ಗುರುಲಿಂಗಮಾಗಿ,
ಶರೀರದಿಂದನುಭವಿಸಿರ್ಪ
ಸಂಸಾರವೇ ಆಚಾರಲಿಂಗ
ಈ ವಿಧದಲ್ಲೆಲ್ಲವು ತದಾಚರಣೆವಿಡಿದಿರ್ಪುದರಿಂ
ಒಂದು ಸುವರ್ಣವೇ ಹಲವು ರೂಪಮಾಗಿ
ಪ್ರಪಂಚ ಸೃಷ್ಟಿ ಸ್ಥಿತಿ ಸಂಹಾರಕ್ಕೂ ಬ್ರಹ್ಮಾಂಡಕ್ಕೂ
ತಾನೇ ಕಾರಣಮಾಗಿರ್ಪಂತೆ,
ಒಂದು ಲಿಂಗವೇ ಹಲವು ರೂಪಾಗಿ,
ಭಕ್ತನ ಸೃಷ್ಟಿ ಸ್ಥಿತಿ ಸಂಹಾರಕ್ಕೂ ಪಿಂಡಾಂಡಕ್ಕೂ ತಾನೇ
ಕಾರಣಮಾಗಿರ್ಪುದು,
ಆ ಪ್ರಪಂಚಕ್ಕೆ ತಾನೇ ಸುಖಪ್ರದನಾಗಿರ್ಪಂತೆ,
ಲಿಂಗವು ನಿರ್ಗುಣಮಾದರೂ ಗುಣರೂಪಮಾದ ಭಕ್ತನಿಗೆ
ತಾನು ಗುಣಮಾಗಿ, ಭಕ್ತಸುಖಪ್ರದಮಾಗಿರ್ಪುದು.
ಸುವರ್ಣದಿಂ ಸುವರ್ಣವೇ ಜೀವನಮಾಗಿರ್ಪ
ಅಧಿಕಬಲಮಂ ಸಂಪಾದಿಸಿ,
ಆ ಬಲದಿಂದ ಶತ್ರುಸಂಹಾರಮಂ ಮಾಡಿ, ರಾಜ್ಯವನ್ನು ಸಂಪಾದಿಸಿ,
ಅದೆಲ್ಲಕ್ಕೂ ತಾನೇ ಕರ್ತೃವಾಗಿ ತನ್ನಧೀನಮಾಗಿರ್ಪ
ಆ ರಾಜ್ಯಾದಿಭೋಗವಂ ತಾನನುಭವಿಸುತ್ತಾ ನಿಶ್ಚಿಂತನಾಗಿ,
ಐಶ್ವರ್ಯಕ್ಕೂ ತನಗೂ ಅಭೇದರೂಪಮಾಗಿರ್ಪ ಅರಸಿನಂತೆ,
ಲಿಂಗದಿಂ ಲಿಂಗವೇ ಜೀವಿತಮಾಗಿರ್ಪ ನಿಜಬಲವಂ ಸಂಪಾದಿಸಿ,
ತದ್ಬಲದಿಂ ತಮೋಗುಣ ಶತ್ರುಸಂಹಾರವಂ ಮಾಡಿ,
ಮನೋರಾಜ್ಯಮಂ ಸಾಧಿಸಿ, ಎಲ್ಲಕ್ಕೂ ತಾನೇ ಕರ್ತೃವಾಗಿ,
ತನ್ನಧೀನಮಾಗಿರ್ಪ ಮನೋಮುಖದಿಂದ ಬಂದ ಸುಖವನ್ನು
ಉಪಾಧಿಯಿಲ್ಲದೆ ನಿಶ್ಚಿಂತಮಾಗನುಭವಿಸುತಾ,
ದೀಪಪ್ರಭೆಯೋಪಾದಿಯಲ್ಲಿ ಲಿಂಗಕ್ಕೂ ತನಗೂ ಭೇದವಿಲ್ಲದೆ,
ಐಶ್ವರ್ಯವಂತನು ತನ್ನ ಮುನ್ನಿನ ಗುಣವಳಿದು
ಐಶ್ವರ್ಯಗುಣವೇ ನಿಜಮುಖ್ಯಗುಣಮಾಗಿ ಸಂಚರಿಸುತ್ತಿರ್ಪಂತೆ,
ಲಿಂಗವಂತನು ತನ್ನ ಪೂರ್ವದ ಗುಣವಳಿದು
ಲಿಂಗದಗುಣಮೆ ನಿಜಗುಣಮಾಗಿರ್ಪುದೇ ಲಿಂಗೈಕ್ಯವು.
ಇಂತಪ್ಪ ಸಕೀಲವೆನಗೆ ಸಾಧ್ಯಮಪ್ಪಂತೆ ಮಾಡಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.