Index   ವಚನ - 68    Search  
 
ಪೂರ್ವಪಶ್ಚಿಮ ದಕ್ಷಿಣೋತ್ತರಗಳಲ್ಲಿ ಕೋಟಲೆಗೊಳುತ್ತಿರ್ಪ ಸೃಷ್ಟಿ ಸ್ಥಿತಿ ಸಂಹಾರಂಗಳಿಗಲಸಿ, ಪಶ್ಚಿಮದಲ್ಲಿ ಸೇರಿ, ಆಚಾರವಿಡಿದು ಭಕ್ತನಾದಲ್ಲಿ. ಶಿವನು ಆತನಿಗೆ ಈಶಾನ್ಯದಲ್ಲಿ ಆತ್ಮಭಾವದಿಂ ಪ್ರಕಾಶಿಸುತ್ತಿರ್ಪನು. ಆತನು ಉತ್ತರದಲ್ಲಿ ಮಹೇಶ್ವರರೂಪದಿಂ ಗುರುಲಿಂಗವಂ ಪೂಜಿಸಲು, ಅಗ್ನೇಯದಲ್ಲಿ ಶಿವನು ಸತ್ವಸ್ವರೂಪಮಪ್ಪ ದೇವತಾಮೂರ್ತಿಯಾಗಿ ಪೂಜಾಯೋಗ್ಯಮಾಗಿಹನು. ಆತನು ದಕ್ಷಿಣದಲ್ಲಿ ಪ್ರಸಾದರೂಪಿಯಾಗಿ ಶಿವಲಿಂಗಪೂಜೆಯಂ ಮಾಡುವಲ್ಲಿ, ಶಿವನು ನೈರುತ್ಯದಲ್ಲಿ ಗ್ರಹಸ್ವರೂಪನಾಗಿ, ಆತನ ಮನಸ್ಸಂ ಗ್ರಹಿಸಿ, ಆತನ ಸುಖದುಃಖಗಳಿಗೆ ಕಾರಣಮಾಗನುಭವಿಸುತ್ತಿಹನು. ಆತನು ಪೂರ್ವದಿಕ್ಕಿನಲ್ಲಿ ಜಂಗಮಲಿಂಗವಂ ಪೂಜಿಸಿದಲ್ಲಿ, ವಾಯುವ್ಯದಲ್ಲಿ ಶಿವನು ಆತನಪ್ರಾಣವೇ ತಾನಾಗಿ, ಆತನನ್ನು ಪ್ರಾಣಲಿಂಗಿಯಂ ಮಾಡಿ, ಆತನೇ ತಾನೆಂದಭಿಮಾನಿಸಿಹನು. ಆತನು ಮಧ್ಯದಲ್ಲಿ ಮಂತ್ರಸ್ವರೂಪಮಾದ ಪ್ರಸಾದಲಿಂಗವಂ ಪೂಜಿಸುವಲ್ಲಿ. ಹೃದಯಮಧ್ಯದಲ್ಲಿ ಪ್ರಸನ್ನನಾಗಿ ಪ್ರಕಾಶಿಸಿ ತಾನೇ ಪತಿ ಆ ಶರಣನೇ ಸತಿಯಾಗಿ, ಅಂತರಂಗದ ಭೋಗದಲ್ಲಿ ಆನಂದಿಸುತ್ತಿಹನು. ಆತನು ಪಂಚಲಿಂಗಂಗಳಂ ಪೂಜಿಸುತ್ತಿರ್ಪಲ್ಲಿ, ತಾನು ಸರ್ವತೋಮುಖನಾಗಿ ಹೃದಯದಲ್ಲಿ ಮಹಾಲಿಂಗಮೆನಿಸಿ, ಆತನೇ ತಾನಾಗಿ ಸಮರಸಭಾವದಲ್ಲಿ ಐಕ್ಯನಂ ಮಾಡಿ, ತಾನು ತಾನೇ ಆಗಿರ್ಪ ಈ ಷಟ್ಸ್ಥಲಲಿಂಗಭೋಗವೆನಗೆ ಸಾಧ್ಯಮಪ್ಪಂತೆ ಮಾಡಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.