ಐಶ್ವರ್ಯದಿಂದ ಶರೀರವು ಪ್ರಕಾಶಿಸುತ್ತಿರ್ಪುದು,
ಮನಸ್ಸಿನಿಂದ ಜೀವನು ಪ್ರಕಾಶಿಸುತ್ತಿರ್ಪನು,
ಶರೀರದ ಸುಖದುಃಖಂಗಳಿಗೆ
ಐಶ್ವರ್ಯವೇ ಕಾರಣಮಾಗಿರ್ಪಂತೆ,
ಜೀವನ ಸುಖದುಃಖಕ್ಕೆ ಮನಸ್ಸೇ ಕಾರಣಮಾಗಿರ್ಪುದು.
ಅರ್ಥವಂ ಪ್ರಪಂಚಮುಖದಲ್ಲಿ ವೆಚ್ಚಿಸಿ,
ಅರ್ಥಕ್ಕೆ ತಕ್ಕ ಉಪಾಂಗವಂ ಸಂಪಾದಿಸಿ,
ತದುಪಭೋಗಯುಕ್ತಮಾಗಿರ್ಪ ಶರೀರದಂತೆ
ಮನಸ್ಸನ್ನು ಕರ್ಮಮುಖದಲ್ಲಿ ವೆಚ್ಚಿಸಿ,
ಆ ಮನಸ್ಸನ್ನಟ್ಟಿ, ಸೂಕ್ಷ್ಮಶರೀರವಂ ಸಂಪಾದಿಸುತ್ತಾ
ಅದರಲ್ಲಿ ಜೀವನನುಭವಿಸುತ್ತಿಹನು.
ಪ್ರಾಣವು ಶರೀರದಲ್ಲಿ ಬದ್ಧಮಾಗಿರ್ಪುದು,
ಅರ್ಥದಲ್ಲಿ ಮನಸ್ಸು ಬದ್ಧಮಾಗಿಹುದು,
ಜಡರೂಪಮಾದೈಶ್ವರ್ಯವು ಶರೀರವಂ ಹೊಂದಿ,
ತಾನು ಚೈತನ್ಯರೂಪಮಾಗಿ ಸಕಲಪದಾರ್ಥಗಳನ್ನು
ಶರೀರಮುಖಕ್ಕೊದಗಿಸಿಕೊಡುವಂತೆ
ಜಡರೂಪಮಾದ ಮನಸ್ಸು ಜೀವನಂ ಹೊಂದಿದಲ್ಲಿ,
ಆ ಜೀವನಿಗೂ ಪರಮಚೈತನ್ಯವಿತ್ತು.
ತಾನು ಚೈತನ್ಯರೂಪಮಾಗಿ ಸಂಚರಿಸುತ್ತಾ,
ಅನುಭವಯೋಗ್ಯವಾದ ಪದಾರ್ಥಂಗಳನ್ನು ಜೀವನಿಗೆ
ಸಂಪಾದಿಸಿಕೊಡುತ್ತಿರ್ಪುದು.
ಸಕಲಪ್ರಪಂಚವು ಅರ್ಥವಿದ್ದಲ್ಲಿ ಸೇರಿ,
ಆ ಅರ್ಥವನ್ನೇ ಜೀವನವಂ ಮಾಡಿಕೊಂಡಿರ್ಪಂತೆ,
ಸಕಲಗುಣಂಗಳು ಮನಸ್ಸನ್ನೇ ಸೇರಿ,
ಆ ಮನಸ್ಸನ್ನೇ ಜೀವನವಂ ಮಾಡಿಹನು.
ಆ ಅರ್ಥವುಳ್ಳ ಪುರುಷನು ಸಕಲರಿಗೂ
ತಾನೂ ಪ್ರಭುವಾಗಿರ್ಪಂತೆ,
ಮನಸ್ಸುಳ್ಳ ಜೀವನು ಸಕಲಗುಣಂಗಳಿಗೂ
ತಾನೇ ಸ್ವಾಮಿಯಾಗಿರ್ಪನು.
ಹೊನ್ನಿನಿಂದ ಹೆಣ್ಣನ್ನೂ ಹೆಣ್ಣಿನಿಂದ ಮಣ್ಣನ್ನೂ ಸಾಧಿಸಿ,
ಆ ಹೆಣ್ಣು ಮಣ್ಣುಗಳಿಂದ ಹೊನ್ನಂ ಸಾಧಿಸುವಂತೆ,
ಮನದಿಂದ ಅಹಂಬುದ್ಧಿಯು,
ಅಹಂಬುದ್ಧಿಯಿಂ ಮನಸ್ಸು ಸಾಧ್ಯಮಪ್ಪದು.
ಐಶ್ವರ್ಯವಿಲ್ಲದೆ ಶರೀರಮೋಕ್ಷ,
ಮನಸ್ಸಿಲ್ಲದೆ ಜೀವನ್ಮುಕ್ತಿ.
ಇಂತಪ್ಪ ವಿಚಿತ್ರವನ್ನು ಗುರುಮುಖದಿಂದ
ತಿಳಿದ ಮಹಾಪುರುಷನು
ಜಂಗಮರೂಪಿಯಾದ ನಿನಗೆ
ಇಂದ್ರಿಯಮುಖದಲ್ಲರ್ಥವನ್ನು ಸಮರ್ಪಿಸಿ,
ಲಿಂಗರೂಪಿಯಾದ ನಿನಗೆ ಭಾವಮುಖದಲ್ಲಿ
ಮನಸ್ಸನ್ನು ಸಮರ್ಪಿಸಿದಲ್ಲಿ,
ಆ ಲಿಂಗವೇ ಪ್ರಾಣಮಪ್ಪುದು.
ಅರ್ಥವಂಚನೆಯೂ ಮನೋವಂಚನೆಯೂ
ಲಿಂಗಜಂಗಮಮುಖದಲ್ಲಿ ಲಯಮಪ್ಪುದೇ ಲಿಂಗೈಕ್ಯ ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
Art
Manuscript
Music
Courtesy:
Transliteration
Aiśvaryadinda śarīravu prakāśisuttirpudu,
manas'sininda jīvanu prakāśisuttirpanu,
śarīrada sukhaduḥkhaṅgaḷige
aiśvaryavē kāraṇamāgirpante,
jīvana sukhaduḥkhakke manas'sē kāraṇamāgirpudu.
Arthavaṁ prapan̄camukhadalli veccisi,
arthakke takka upāṅgavaṁ sampādisi,
tadupabhōgayuktamāgirpa śarīradante
manas'sannu karmamukhadalli veccisi,
ā manas'sannaṭṭi, sūkṣmaśarīravaṁ sampādisuttā
adaralli jīvananubhavisuttihanu.
Prāṇavu śarīradalli bad'dhamāgirpudu,
Arthadalli manas'su bad'dhamāgihudu,
jaḍarūpamādaiśvaryavu śarīravaṁ hondi,
tānu caitan'yarūpamāgi sakalapadārthagaḷannu
śarīramukhakkodagisikoḍuvante
jaḍarūpamāda manas'su jīvanaṁ hondidalli,
ā jīvanigū paramacaitan'yavittu.
Tānu caitan'yarūpamāgi san̄carisuttā,
anubhavayōgyavāda padārthaṅgaḷannu jīvanige
sampādisikoḍuttirpudu.
Sakalaprapan̄cavu arthaviddalli sēri,
ā arthavannē jīvanavaṁ māḍikoṇḍirpante,
sakalaguṇaṅgaḷu manas'sannē sēri,
ā manas'sannē jīvanavaṁ māḍ'̔ihanu.
Ā arthavuḷḷa puruṣanu sakalarigū
tānū prabhuvāgirpante,
manas'suḷḷa jīvanu sakalaguṇaṅgaḷigū
tānē svāmiyāgirpanu.
Honnininda heṇṇannū heṇṇininda maṇṇannū sādhisi,
ā heṇṇu maṇṇugaḷinda honnaṁ sādhisuvante,
manadinda ahambud'dhiyu,
ahambud'dhiyiṁ manas'su sādhyamappadu.
Aiśvaryavillade śarīramōkṣa,
manas'sillade jīvanmukti.
Intappa vicitravannu gurumukhadinda
tiḷida mahāpuruṣanu
jaṅgamarūpiyāda ninage
indriyamukhadallarthavannu samarpisi,
liṅgarūpiyāda ninage bhāvamukhadalli
manas'sannu samarpisidalli,
ā liṅgavē prāṇamappudu.
Arthavan̄caneyū manōvan̄caneyū
liṅgajaṅgamamukhadalli layamappudē liṅgaikya kāṇā
mahāghana doḍḍadēśikāryaguruprabhuve.