Index   ವಚನ - 86    Search  
 
ಜಾಗ್ರದೊಳಗೆ ನಾಲ್ಕರಲ್ಲೊಂದು ಪಾಲು ಸುಷುಪ್ತಿಯು, ಸುಷುಪ್ತಿಯಲ್ಲಿ ನಾಲ್ಕರಲ್ಲೊಂದುಪಾಲು ಸ್ವಪ್ನವು. ಅದೆಂತೆಂದೊಡೆ: ಚಂದ್ರ ಸೂರ್ಯರಿಲ್ಲದ ದಿವಸಂಗಳೇ ಸುಷುಪ್ತಿಕಾಲ ಪ್ರಮಾಣವೂ, ಆ ಕತ್ತಲೆಯೊಳಗಿರ್ಪ ನಕ್ಷತ್ರಪ್ರಕಾಶವೇ ಸ್ವಪ್ನಪ್ರಮಾಣವೂ ಆಗಿ, ನಾಲ್ಕರಲ್ಲೊಂದುಪಾಲನ್ನು ಕತ್ತಲೆಯು ಜೈಸುತ್ತಿರ್ಪುದು. ಜಾಗ್ರತ್ಸ್ವರೂಪರಾದ ಚಂದ್ರ ಸೂರ್ಯರು ನಕ್ಷತ್ರಮಾರ್ಗವನ್ನನುಸರಿಸಿ ತಿರುಗುತ್ತಿರ್ಪಂತೆ, ಜೀವನು ಜಾಗ್ರದಲ್ಲಿ ಸ್ವಪ್ನಮಾರ್ಗವನನುಸರಿಸಿ ತಿರುಗುತ್ತಿರ್ಪುದರಿಂ ಜಾಗ್ರದೊಳಗಣ ಸ್ವಪ್ನವೇ ಸಾಕಾರವು, ಸುಷುಪ್ತಿಯೊಳಗಣ ಸ್ವಪ್ನವೇ ನಿರಾಕಾರವು, ನಿರಾಕಾರ ಸ್ವಪ್ನದಲ್ಲಿ ಮನಸ್ಸು ಸಾಕಾರವಾಗಿ ತಿರುಗುತ್ತಿರ್ಪುದು, ಸಾಕಾರಸ್ವಪ್ನದಲ್ಲಿ ಶರೀರಾಕಾರವಾಗಿ ತಿರುಗುತ್ತಿರ್ಪುದು, ಸ್ವಪ್ನವಿಲ್ಲದ ಜಾಗ್ರ ಸುಷುಪ್ತಿಗಳೇ ಕಾಲಾತೀತವಾಗಿ, ಪರಮಾನಂದರೂಪಮಾಗೊಂದಕ್ಕೊಂದು ಹೊಂದದೇ ಇಹವು, ಅವೇ ಶಿವಶಕ್ತಿಸ್ವರೂಪಗಳು. ತದ್ವಿಯೋಗದಲ್ಲಿ ಬೀಜವೊಡೆದುಮೂಡಿ ಪ್ರಕಾಶಿಸುವ ವೃಕ್ಷದಂತಿರ್ಪುದೇ ತೂರ್ಯಾವಸ್ಥೆಯು, ಅಂತಪ್ಪ ಜಾಗ್ರತ್ಸ್ವಪ್ನ ಸುಷುಪ್ತಿಗಳನಳಿದ ತೂರ್ಯವೇ ನಿಜವು, ನಿಜವೇ ತಾನು, ತನ್ನಂ ತಾನರಿವುದೇ ಮೋಕ್ಷವು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.