ಜೀವನು ತನಗೆ ರುದ್ರಸ್ವರೂಪಮಾದ
ಅಗ್ನಿಯು ಆದಿಯಲ್ಲಿ ಪ್ರಸನ್ನಮಾದಲ್ಲಿ
ತಚ್ಛಕ್ತಿಯಿಂ ಪೃಥಿವೀ ಅಪ್ಪುಗಳಂ ಸಂಹರಿಸಿ,
ಅವುಗಳಲ್ಲಿರ್ಪ ಸಾರವಸ್ತುಗಳಿಂದ
ಸ್ವಸ್ಥಾನಮಾಗಿರ್ಪ ಶರೀರಮಂ ಪೋಷಿಸುತ್ತಾ,
ಪ್ರಪಂಚಹೇತುವಾಗಿರ್ಪ ಸೃಷ್ಟಿ ಸ್ಥಿತಿ
ಸಂಹಾರಂಗಳನೆಸಗುತ್ತಾ,
ಅಹಂಕರಿಸುತ್ತಿರ್ಪುದಲ್ಲದೆ,
ಆ ಮಹಾರುದ್ರನಿಂ ತನಗೆ ಬಂದಧಿಕಾರಮಂ ನೆನೆಯದೆ,
ವಿಷ್ಣು ಬ್ರಹ್ಮರ ಬಲೆಗೆ ಸಿಕ್ಕಿ, ಅಪಥ್ಯಾದಿದೋಷಂಗಳನೆಸಗಿದಲ್ಲಿ,
ಆ ಮಹಾರುದ್ರನ ದಯೆಯು ತಪ್ಪಿ,
ಆ ದೋಷಗಳು ಧಾತುಗಳಂ ಪ್ರವೇಶಿಸಲು,
ತನಗೆ ಪದಾರ್ಥಂಗಳಂ ಸಂಹರಿಸುವುದಕ್ಕೂ
ಶರೀರವಂ ರಕ್ಷಿಸುವುದಕ್ಕೂ
ಅಧಿಕಾರವು ತಪ್ಪಿ, ಕಾಯವಂ ಬಿಟ್ಟು ಹೊರಟು,
ಆ ಮಹಾರುದ್ರನ ಆಗ್ರಹಮುಖದಲ್ಲಿ ಯಾತನೆಬಡುತ್ತಾ,
ಮಾಯಾರೂಪವಾದ ಆಕಾಶದಲ್ಲಿ ತೊಳಲುತ್ತಾ,
ತಾನೇ ಪಿಶಾಚರೂಪಮಾಗಿ ತೊಳಲುತ್ತಿರ್ಪನೆಂತೆಂದೊಡೆ:
ಯಾವುದಕ್ಕೂ ಅಧಿಕಾರವಿಲ್ಲದ ಮನುಷ್ಯನು
ತನಗೆ ಬೇಕಾದ ಸ್ವಲ್ಪ ಪದಾರ್ಥವನಾದರೂ ಒಬ್ಬರಂ ಹಿಡಿದು ಬಿಡದೆ
ಕಾಡಿ ಬೇಡಿ ಆಗ್ರಹ ನಿಗ್ರಹಂಗಳಿಗೊಳಗಾಗಿ,
ತನಗೊಳಗಾಗದವರಂ ಬಾಧಿಸಿ,
ಅತಿಪ್ರಯಾಸದಲ್ಲಿ ಸ್ವಲ್ಪ ಪದಾರ್ಥವಂ ಕೊಂಡು,
ಅನುಭವಿಸುತ್ತಿರ್ಪಂತೆ,
ಈ ಜೀವನು ಪಿಶಾಚತ್ವದಲ್ಲಿ ಭಿನ್ನ ಜೀವರಂ ಗ್ರಹಿಸಿ,
ಅತಿದುಃಖವನ್ನೂ ಸ್ವಲ್ಪ ಸುಖವನ್ನೂ ಅನುಭವಿಸುತ್ತಿರ್ಪನು.
ಆ ಮಹಾರುದ್ರನ ಕೃಪೆಯೊದಗಿದಲ್ಲಿ,
ಶರೀರಾದಿ ಸಕಲಪ್ರಪಂಚಸುಖಗಳನನುಭವಿಸಿ,
ಅವೆಲ್ಲಕ್ಕೂ ತಾನೇ ಕರ್ತನೆಂದಹಂಕರಿಸುತ್ತಾ ಭವಕೋಟಲೆಗಲಸಿ,
ತನ್ನ ಮಿಥ್ಯಾಹಂಕಾರಮಂ ಬಿಟ್ಟು,
ಎಲ್ಲವೂ ಪರಶಿವನಲೀಲೆಯಲ್ಲದೆ ತಾನಸ್ವತಂತ್ರನೆಂಬುದಂ
ಪರತತ್ವವಿಚಾರದಿಂ ತಿಳಿದಲ್ಲಿ,
ತಾನು ಮಾಡಿದ ಕರ್ಮವೆಲ್ಲಾ ಸದಾಶಿವನಿಗರ್ಪಿತಮಾಯಿತ್ತು,
ತಾಂ ನಿರ್ಲೇಪನಾದನು, ಸದಾಶಿವನು ತೃಪ್ತನಾದಲ್ಲಿ
ಜೀವನ್ಮುಕ್ತನಾದನು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.